Monday, 26 August 2013

ಡಿ.ಇಡಿ ಅಂದು-ಇಂದು


ಒಂದು ಕಾಲದಲ್ಲಿ ಶಿಕ್ಷಕರ ತರಬೇತಿಗೆ ಪ್ರವೇಶ ಪಡೆಯುವುದು ಪ್ರತಿಷ್ಠೆಯ ಸಂಗತಿಯಾಗಿತ್ತು. ಆದರೆ, ಇಂದು ಸುಲಭವಾಗಿ ಸೀಟು ಕೊಡುತ್ತೇವೆ ಎಂದರೂ ಪ್ರವೇಶ ಪಡೆಯ ಬಯಸುವವರ ಸಂಖ್ಯೆ ಕ್ಷೀಣಿಸುತ್ತಿದೆ.
ಪ್ರಾಥಮಿಕ ಶಾಲೆಯಲ್ಲಿ ಕಲಿತ ವಿದ್ಯೆ ಜೀವನ ಪರ್ಯಂತ ಇರುತ್ತದೆ. ಹಾಗಾಗಿ `ನಿಮ್ಮ ನೆಚ್ಚಿನ ಗುರುಗಳು ಯಾರು' ಎಂದು ಕೇಳಿದರೆ ಬಹುತೇಕರ ಸ್ಮೃತಿಪಟಲದಲ್ಲಿ ತಕ್ಷಣ ಬರುವುದು ಶಿಕ್ಷಣದ ಓಂನಾಮ ಕಲಿಸಿದ ಪ್ರಾಥಮಿಕ ಶಾಲೆಯ ಗುರುಗಳೇ. ಅವರು ಶಿಲ್ಪಿಗಳು ಮೂರ್ತಿಯನ್ನು ಕೆತ್ತಿದಂತೆ, ಕಾಡು ಕಲ್ಲಿನಂತಿದ್ದ ನಮ್ಮನ್ನು ತಿದ್ದಿ, ತೀಡಿ, ಜೀವ ತುಂಬಿರುತ್ತಾರೆ. ಇಂತಹ ಗುರುಗಳನ್ನು ಸೃಷ್ಟಿಸುವುದು ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಕೇಂದ್ರಗಳು.
ಭವ್ಯವಾದ ಕಟ್ಟಡಕ್ಕೆ ಅಡಿಪಾಯ ಹೇಗೆ ಭದ್ರ ಬುನಾದಿಯೋ, ಹಾಗೇ ಮಕ್ಕಳ ಭವಿಷ್ಯದ ಶಿಕ್ಷಣಕ್ಕೆ ಪ್ರಾಥಮಿಕ ಶಿಕ್ಷಣವೇ ಅಡಿಪಾಯ. ಹಾಗಾಗಿ ಒಂದು ಮಗು ಪ್ರಾಥಮಿಕ ಶಿಕ್ಷಣವನ್ನು ಹೇಗೆ ಪಡೆದಿರುತ್ತದೋ ಹಾಗೆಯೇ ಅದರ ಭವಿಷ್ಯ ನಿರ್ಧಾರವಾಗುತ್ತದೆ. ಇಂತಹ ಶಿಕ್ಷಣ ನೀಡುವ ಶಿಕ್ಷಕರನ್ನು ರೂಪಿಸುವ ತರಬೇತಿ ಕೇಂದ್ರಗಳು ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಸಾಮಾಜಿಕ ಸಂಸ್ಥೆಗಳೂ ಆಗಿರುತ್ತವೆ.
ಹಿಂದೆ ಬ್ರಿಟಿಷರು ರೂಪಿಸಿದ್ದ ಒಂದು ವರ್ಷದ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿಯು, ಸ್ವಾತಂತ್ರ್ಯಾ ನಂತರ ಟಿ.ಸಿ.ಎಚ್ ಎಂಬ ಶಿರೋನಾಮೆ ಪಡೆಯಿತು. 1992ಕ್ಕಿಂತ ಮೊದಲು ಟಿ.ಸಿ.ಎಚ್ ತರಬೇತಿ ಪಡೆಯಲು ಕನಿಷ್ಠ ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ ಆಗಿದ್ದು, ಆಯಾ ಕಾಲೇಜು ಮಟ್ಟದಲ್ಲಿ ಸಂದರ್ಶನದ ಮೂಲಕ ಪ್ರವೇಶ ನೀಡಲಾಗುತ್ತಿತ್ತು. ಆಗ ಪ್ರತಿ ಕಾಲೇಜಿನಲ್ಲಿ ಗರಿಷ್ಠ 50 ಅಭ್ಯರ್ಥಿಗಳಿಗೆ ಅವಕಾಶವಿದ್ದರೂ ಹೆಚ್ಚಿನವರು ಸೇರಲು ಆಸಕ್ತಿ ತೋರುತ್ತಿರಲಿಲ್ಲ. ನಂತರದ ವರ್ಷಗಳಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಸರ್ಕಾರಗಳು ಒತ್ತು ನೀಡಿ ಶಿಕ್ಷಕರ ನೇಮಕ ಮಾಡಿಕೊಳ್ಳುತ್ತಿದ್ದಂತೆಯೇ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಯಿತು. ಆಗ ಆಯಾ ಕಾಲೇಜು ಮಟ್ಟದಲ್ಲಿ ಮೆರಿಟ್ ಆಧಾರದ ಮೇಲೆ 30 ಅಭ್ಯರ್ಥಿಗಳಿಗೆ ಪ್ರವೇಶ ದೊರೆಯಲಾರಂಭಿಸಿತು. ತರುವಾಯ, ತರಬೇತಿಗೆ ಬೇಡಿಕೆ ಹೆಚ್ಚಾದಂತೆ ಮೆರಿಟ್ ಮತ್ತು ಮೀಸಲಾತಿಗೆ ತಕ್ಕಂತೆ ಪ್ರವೇಶ ನೀಡಲಾಗುತ್ತಿತ್ತು.
ಮಾದರಿ ಕ್ರಮ
ಎಚ್.ಜಿ.ಗೋವಿಂದೇಗೌಡರು ಶಿಕ್ಷಣ ಸಚಿವರಾಗಿದ್ದಾಗ ಯಾವ ಪ್ರಭಾವಕ್ಕೂ ಒಳಗಾಗದೆ, ಒಂದು ಲಕ್ಷಕ್ಕೂ ಹೆಚ್ಚು ಪ್ರಾಥಮಿಕ ಶಿಕ್ಷಕರನ್ನು ಪ್ರವೇಶ ಪರೀಕ್ಷೆಯ ಮೂಲಕ ಮೆರಿಟ್ ಮತ್ತು ಮೀಸಲಾತಿ ಆಧಾರದ ಮೇಲೆ ನೇರ ನೇಮಕಾತಿ ಮಾಡಿಕೊಂಡರು. ಈ ಪಾರದರ್ಶಕ ಕ್ರಮ ಇಡೀ ರಾಷ್ಟ್ರಕ್ಕೆ ಮಾದರಿಯಾಯಿತು. ಮಕ್ಕಳನ್ನು ಲಾಲಿಸಿ ಪಾಲಿಸಿ ಪ್ರೀತಿಯಿಂದ ಕಲಿಸಲು ಸೂಕ್ತ ಎಂಬ ಕಾರಣಕ್ಕೆ ಈ ಆಯ್ಕೆಯಲ್ಲಿ ಶೇ 50ರಷ್ಟು ಮಹಿಳೆಯರಿಗೆ ಅವಕಾಶ ನೀಡಿದ್ದು ಸಹ ಇತಿಹಾಸ. ಆಗ ರಾಜ್ಯದಲ್ಲಿ ಅನುದಾನಿತ, ಅನುದಾನ ರಹಿತ ಸರ್ಕಾರಿ ಟಿ.ಸಿ.ಎಚ್ ಕಾಲೇಜುಗಳು ಮತ್ತು ಡಯಟ್‌ಗಳು ಸೇರಿದಂತೆ 234 ತರಬೇತಿ ಕಾಲೇಜುಗಳು ಮಾತ್ರ ಇದ್ದವು. ಇವೆಲ್ಲವುಗಳಿಂದ ಪ್ರತಿ ವರ್ಷ ತರಬೇತಿ ಮುಗಿಸಿಕೊಂಡು ಬರುತ್ತಿದ್ದವರ ಸಂಖ್ಯೆ ಕೇವಲ 4ರಿಂದ 5 ಸಾವಿರ. ಆದರೆ ಇವರೆಲ್ಲರೂ ಕೋರ್ಸ್ ಮುಗಿಸಿದ ಒಂದೆರಡು ತಿಂಗಳಲ್ಲೇ ಸರ್ಕಾರಿ ಕೆಲಸ ಪಡೆಯುತ್ತಿದ್ದುದು ಗಮನಾರ್ಹ.
ಹೀಗೆ 2002ರವರೆಗೆ ಟಿ.ಸಿ.ಎಚ್ ಎಂಬ ಹೆಸರು ಹೊಂದಿದ್ದ ಇಂದಿನ ಡಿ.ಇಡಿ.ಗೆ ಅತ್ಯಂತ ಬೇಡಿಕೆ ಸೃಷ್ಟಿಯಾಯಿತು. ಬಳಿಕ ಬಂದ ಎಸ್.ಎಂ.ಕೃಷ್ಣ ನೇತೃತ್ವದ ಸರ್ಕಾರದಲ್ಲಿ ಡಿ.ಇಡಿ ಕಾಲೇಜುಗಳ ಸಂಖ್ಯೆ 1016ಕ್ಕೆ ಏರಿತು. ಈ ಮೂಲಕ, ಡಿ.ಇಡಿ ಆಕಾಂಕ್ಷಿಗಳ ಸಂಖ್ಯೆ ಮತ್ತು ಬೇಡಿಕೆ ಊಹಿಸಲಾರದಷ್ಟು ಹೆಚ್ಚಾದಾಗ, ಅವರೆಲ್ಲರಿಗೂ ಪ್ರವೇಶ ನೀಡಲು ಸಾಧ್ಯವಾಗಲಿಲ್ಲ. ಆಗ ಮೆರಿಟ್ ಮತ್ತು ಮೀಸಲಾತಿಗೆ ಅನುಗುಣವಾಗಿ ಪ್ರವೇಶ ನೀಡಲು ಕೇಂದ್ರೀಕೃತ ದಾಖಲಾತಿ ಘಟಕವನ್ನು ತೆರೆದು, ರಾಜ್ಯ ಮಟ್ಟದಲ್ಲಿ ಡಯಟ್‌ಗಳ ಮೂಲಕ ಸೀಟು ಹಂಚಿಕೆ  ವ್ಯವಸ್ಥೆಯನ್ನು ಜಾರಿಗೆ ತರಲಾಯಿತು.
ಈ ಸಂದರ್ಭದಲ್ಲಿ ಡಿ.ಇಡಿ.ಗೆ ಸರ್ಕಾರಿ ಕೋಟಾದಡಿ ಪ್ರವೇಶ ಪಡೆಯಲು ಪಿ.ಯು.ಸಿ.ಯಲ್ಲಿ ಶೇ 80ಕ್ಕಿಂತ ಹೆಚ್ಚು ಅಂಕ ಪಡೆದಿರಬೇಕಿತ್ತು. ಅಂದು ಬಿ.ಇ, ಬಿ.ಎ.ಎಂ.ಎಸ್, ಬಿ.ಡಿ.ಎಸ್, ಬಿ.ಇಡಿ ಇತ್ಯಾದಿ ಕೋರ್ಸ್‌ಗಳಿಗೆ ಸುಲಭವಾಗಿ ಪ್ರವೇಶ ದೊರೆಯುತ್ತಿದ್ದರೂ ಡಿ.ಇಡಿ.ಗೆ ಪ್ರವೇಶ ಸಿಗುವುದು ದುಸ್ತರವಾಗಿತ್ತು.
ಸರ್ಕಾರ 95ರ ದಶಕದಲ್ಲಿ ಪ್ರಾಥಮಿಕ ಶಾಲೆಗಳಿಗೆ 1:40 ಅನುಪಾತದಂತೆ ಶಿಕ್ಷಕರನ್ನು ನೇಮಿಸಿಕೊಳ್ಳಲು ಪ್ರಾರಂಭಿಸಿತು. ಪ್ರತಿ ವರ್ಷ ಈ ಆಯ್ಕೆ ನಡೆಯುತ್ತಿದ್ದುದರಿಂದ ಸರ್ಕಾರಿ ಕೆಲಸ ಗ್ಯಾರಂಟಿ ಎಂಬುದು ವಿದ್ಯಾರ್ಥಿಗಳ ನಿರೀಕ್ಷೆಯಾಗಿತ್ತು.
ಅಂದು ಬಿ.ಇ, ಕಾನೂನು ಮತ್ತಿತರ ಪದವಿ ಪಡೆದ ಪ್ರತಿಭಾವಂತರು ಸಹ ಡಿ.ಇಡಿ. ತರಬೇತಿ ಪಡೆದು ಸರ್ಕಾರಿ ಶಾಲೆಗಳಿಗೆ ಶಿಕ್ಷಕರಾಗಿ ನೇಮಕಗೊಳ್ಳುತ್ತಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬೇಡಿಕೆ ಹೆಚ್ಚಾದಂತೆ ದಕ್ಷಿಣ ಭಾರತದ ರಾಜ್ಯಗಳ ಮಾದರಿಯಲ್ಲಿ ಕರ್ನಾಟಕ ಸಹ 1994ರಲ್ಲಿ ಪಿ.ಯು.ಸಿ.ಯನ್ನು ಕನಿಷ್ಠ ವಿದ್ಯಾರ್ಹತೆಯಾಗಿ ನಿಗದಿಪಡಿಸಿತು. ಇದರಿಂದ ಗುಣಮಟ್ಟದ ಶಿಕ್ಷಕರಿಗೆ ತರಬೇತಿಯನ್ನು ನೀಡಲು ಅವಕಾಶವಾಯಿತು.
2008ರಲ್ಲಿ ರಾಷ್ಟ್ರ ಮಟ್ಟದ ಎನ್.ಸಿ.ಟಿ.ಇ ದೇಶದ ಎಲ್ಲ ಡಿ.ಇಡಿ, ಬಿ.ಇಡಿ. ಕಾಲೇಜುಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಅವುಗಳ ಪ್ರವೇಶದ ಮಿತಿಯನ್ನು 30ರಿಂದ 50ಕ್ಕೆ ಏರಿಸಿತು. ಜೊತೆಗೆ ರಾಜ್ಯ ಸರ್ಕಾರ ಮನಸೋ ಇಚ್ಛೆ ಕಾಲೇಜುಗಳನ್ನು ಆರಂಭಿಸಲು ಅವಕಾಶ ನೀಡಿದ್ದರಿಂದ ಪ್ರತಿ ವರ್ಷ ಡಿ.ಇಡಿ ತರಬೇತಿ ಪಡೆದು ಬರುವವರ ಸಂಖ್ಯೆ ಸುಮಾರು 50,000ಕ್ಕಿಂತ ಹೆಚ್ಚಾಯಿತು. ಆದರೆ ನೇಮಕಾತಿ ಮಾತ್ರ ಐದಾರು ಸಾವಿರ ಮಾತ್ರವಾದ್ದರಿಂದ ಕೆಲಸ ಸಿಗದವರ ಸಂಖ್ಯೆ ಹೆಚ್ಚಾಗುತ್ತಲೇ ಹೋಗಿ, ಇಂದು ಅದು ಹತ್ತಾರು ಲಕ್ಷಕ್ಕೆ ಏರಿದೆ. 
ರಾಜ್ಯದಲ್ಲಿ ಅಂದಾಜು 51,180 ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿವೆ.
ಬದಲಾದ ಸ್ಥಿತಿ
ಡಿ.ಇಡಿ ಕಾಲೇಜುಗಳಲ್ಲಿ ಹುಡುಗಿಯರೇ ಹೆಚ್ಚಾಗಿದ್ದು, ಬೆರಳೆಣಿಕೆಯಷ್ಟು ಹುಡುಗರಿರುತ್ತಿದ್ದರು. ಸ್ವಾವಲಂಬಿ ಜೀವನದ ಆಕಾಂಕ್ಷೆ, ಆಯ್ಕೆಯಲ್ಲಿ ಶೇ 50 ಮೀಸಲಾತಿ, ಕೆಲಸದ ಖಚಿತತೆ ಇತ್ಯಾದಿ ಕಾರಣಗಳಿಂದ ಡಿ.ಇಡಿ ಸೇರಲು ಹೆಣ್ಣು ಮಕ್ಕಳಿಗೆ ಹೆಚ್ಚಿನ ಪ್ರೇರಣೆ ದೊರೆಯುತ್ತಿತ್ತು. ಸರ್ಕಾರಿ ಕೆಲಸ ಸಿಗದಿದ್ದರೂ ಖಾಸಗಿ ಶಾಲೆಗಳಲ್ಲಾದರೂ ನಾಲ್ಕಾರು ಸಾವಿರ ಸಂಬಳ ತೆಗೆದುಕೊಂಡು ಸ್ವಾವಲಂಬಿ ಜೀವನ ನಡೆಸಲಿ ಎಂಬ ಆಸೆಯಿಂದ ಎಷ್ಟೋ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಶಿಕ್ಷಕರ ತರಬೇತಿಗೆ ಸೇರಿಸುತ್ತಿದ್ದರು. ಇದರಿಂದ ಡಿ.ಇಡಿ ತರಬೇತಿಗೆ ಬೇಡಿಕೆ ಹೆಚ್ಚಾಗಿ ಖಾಸಗಿ ಡಿ.ಇಡಿ ಸಂಸ್ಥೆಗಳ ಆಡಳಿತ ಮಂಡಳಿಗಳವರು ಸೀಟುಗಳನ್ನು ಮಾರಿಕೊಂಡು ದಿನ ಬೆಳಗಾಗುವುದರಲ್ಲಿ ಕುಬೇರರಾಗುತ್ತಿದ್ದರು.
2011ರವರೆಗೆ ಜಿಲ್ಲಾ ಮಟ್ಟದ ಡಯಟ್‌ಗಳ ಮೂಲಕ ಅರ್ಜಿ ಕರೆದು ಮೆರಿಟ್, ಮೀಸಲಾತಿ ಮತ್ತು ಸಾಮಾನ್ಯ ವರ್ಗದವರಿಗೆ ದ್ವಿತೀಯ ಪಿ.ಯು.ಸಿ.ಯಲ್ಲಿ ಕನಿಷ್ಠ ಶೇ 50, ಪ.ಜಾತಿ/ಪಂಗಡ, ಅಂಗವಿಕಲರು, ಪ್ರವರ್ಗ 1ಕ್ಕೆ ಶೇ 45 ಅಂಕ ನಿರ್ಧರಿಸಿ, ಸರ್ಕಾರಿ ಮತ್ತು ಆಡಳಿತ ಮಂಡಳಿ ಕೋಟಾದಡಿ ಪ್ರವೇಶ ನೀಡಲಾಗುತ್ತಿತ್ತು. ಆದರೆ 2012-13ರಿಂದ ಡಿ.ಇಡಿ ಪ್ರವೇಶ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನವನ್ನು ಸರಳಗೊಳಿಸಿದ್ದರೂ ಇಂದು ಈ ತರಬೇತಿಗೆ ಅರ್ಜಿ ಹಾಕುವವರ ಸಂಖ್ಯೆ ಕಡಿಮೆಯಾಗಿದೆ. ಕೆಲವು ಪೋಷಕರು ಸರ್ಕಾರಿ ಕೆಲಸ ಸಿಗಬಹುದೆಂಬ ಆಸೆಯಿಂದ ಹಣ ಖರ್ಚು ಮಾಡಿ ಮಕ್ಕಳಿಗೆ ಡಿ.ಇಡಿ ತರಬೇತಿ ಕೊಡಿಸಿ, ಇತ್ತ ಕೆಲಸ ಅತ್ತ ದುಡ್ಡು ಎರಡೂ ಇಲ್ಲದೆ ತಲೆ ಮೇಲೆ ಕೈಹೊತ್ತು ಕೂತಿದ್ದಾರೆ.
ಖಾಸಗಿ ಕಾಲೇಜುಗಳು ಅಸ್ತಿತ್ವ ಉಳಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಏನೆಲ್ಲ ಆಸೆ ತೋರಿಸಿ, ದೂರಶಿಕ್ಷಣದ ರೀತಿಯಲ್ಲಿ ತರಬೇತಿ ನೀಡುವ ಸ್ಥಿತಿಯನ್ನು ತಲುಪಿವೆ. ನಾ ಮುಂದು ತಾ ಮುಂದು ಎಂದು ಸ್ಪರ್ಧೆಯೊಂದಿಗೆ ಪ್ರವೇಶ ನೀಡಿ, ತಮ್ಮ ಸಂಸ್ಥೆಯನ್ನು ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿವೆ. ಆದರೂ ನಿರೀಕ್ಷೆಯಷ್ಟು ವಿದ್ಯಾರ್ಥಿಗಳು ಸೇರುತ್ತಿಲ್ಲ. ಹೆಚ್ಚಿನ ಸಂಸ್ಥೆಗಳು ತರಬೇತಿ, ಹಾಜರಾತಿಯಲ್ಲೂ ವಿನಾಯಿತಿ ನೀಡಿ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳುತ್ತಿವೆ. ನಾ ಬಿಡೆ, ನೀ ಕೊಡೆ ಎಂಬಂತೆ ಆಸಕ್ತಿಯೇ ಇಲ್ಲದ ವಿದ್ಯಾರ್ಥಿಗಳಿಗೂ ಪ್ರವೇಶ ನೀಡುತ್ತಿವೆ. ವಿಶೇಷ ಎಂದರೆ ಇವರಲ್ಲಿ ಕೆಲವರು ಪ್ರವೇಶ ಪಡೆದ ದಿನ ಕಾಲೇಜಿಗೆ ಬಂದರೆ ನಂತರ ಪರೀಕ್ಷೆಯ ದಿನವಷ್ಟೇ ಬರುವವರಿದ್ದಾರೆ. ಇಂತಹವರು ಶಿಕ್ಷಕರಾಗಿ ಬಂದರೆ ನಮ್ಮ ಮಕ್ಕಳ ಭವಿಷ್ಯ ಊಹಿಸುವಂತಿಲ್ಲ.
ಕಾರಣ ಏನು?
ಹಿಂದಿನ ಎಸ್.ಎಂ.ಕೃಷ್ಣ ನೇತೃತ್ವದ ಸರ್ಕಾರ ಸದುದ್ದೇಶದಿಂದ ಡಿ.ಇಡಿ ಕಾಲೇಜು ಆರಂಭಿಸಲು ತೀರ್ಮಾನಿಸಿದಾಗ ರಾಜಕಾರಣಿಗಳು ಹಾಗೂ ಅವರ ಅನುಯಾಯಿಗಳು ಅದನ್ನು ದುರುಪಯೋಗ ಪಡಿಸಿಕೊಂಡರು. ಇಲಾಖೆಯ ಕನಿಷ್ಠ ಮಾನದಂಡಗಳನ್ನೂ ಅನುಸರಿಸದೆ, ಹಳ್ಳಿ, ಪಟ್ಟಣ, ನಗರಗಳ ಮೂಲೆ ಮೂಲೆಯ ಶೆಡ್ಡು, ಮನೆಗಳಲ್ಲಿ ದಿನಸಿ ಅಂಗಡಿಗಳಂತೆ ಡಿ.ಇಡಿ. ಮತ್ತು ಬಿ.ಇಡಿ ಕಾಲೇಜುಗಳನ್ನು ಆರಂಭಿಸಲು ಮುಂದಾದರು. ಎನ್.ಸಿ.ಟಿ.ಇ.ಯಂತಹ ರಾಷ್ಟ್ರ ಮಟ್ಟದ ಸಂಸ್ಥೆಯು ಕಾಲೇಜುಗಳ ಕಟ್ಟಡ, ಮೂಲ ಸೌಲಭ್ಯ, ಅಗತ್ಯ ಉಪನ್ಯಾಸಕರು ಇತ್ಯಾದಿ ಮಾನದಂಡಗಳನ್ನು ವಿಧಿಸಿದ್ದರೂ, ಕೇಂದ್ರ ಪರಿಶೀಲನಾ ಸಮಿತಿಯ ದಿಕ್ಕು ತಪ್ಪಿ, ರಾಜ್ಯ ಸರ್ಕಾರದಿಂದ ನಿರಾಕ್ಷೇಪಣಾ ಪತ್ರ (ಎನ್.ಒ.ಸಿ) ಪಡೆದು ಶಿಕ್ಷಣದ ಗಂಧ ಗಾಳಿ ಅರಿಯದ, ಪಾವಿತ್ರ್ಯವೂ ತಿಳಿಯದ ವ್ಯಾಪಾರಿ ಮನೋಭಾವದವರು ಡಿ.ಇಡಿ., ಬಿ.ಇಡಿ. ಸಂಸ್ಥೆಗಳನ್ನು ಆರಂಭಿಸಲು ಮುಂದಾದದ್ದು ಒಂದು ದುರಂತ.
1996ರವರೆಗೆ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಪ್ರತ್ಯೇಕ ಕೋಟಾ ಇರಲಿಲ್ಲ. ನಂತರ ಸರ್ಕಾರ ಸಾಮಾನ್ಯ ವರ್ಗದ  ಅನುದಾನಿತ ಕಾಲೇಜುಗಳಿಗೆ ಶೇಕಡಾ 25, ಅಲ್ಪಸಂಖ್ಯಾತರ ಅನುದಾನಿತ ಕಾಲೇಜುಗಳಿಗೆ ಶೇಕಡಾ 35 ಮತ್ತು ಅನುದಾನರಹಿತ ಕಾಲೇಜುಗಳಿಗೆ ಶೇಕಡಾ 50ರಷ್ಟು ಸೀಟನ್ನು ಭರ್ತಿ ಮಾಡಿಕೊಳ್ಳಲು ಅವಕಾಶ ನೀಡಿತು. ಉಳಿದ ಸೀಟುಗಳನ್ನು ಸರ್ಕಾರ ನೇರವಾಗಿ ಮೆರಿಟ್ ಮತ್ತು ಮೀಸಲಾತಿ ಆಧರಿಸಿ ಭರ್ತಿ ಮಾಡುವ ನಿಯಮವನ್ನು ರೂಪಿಸಿತು. ಇದರಿಂದ ಶಿಕ್ಷಕರ ತರಬೇತಿ ಸಂಸ್ಥೆಗಳು ನಿರ್ವಹಣೆಗೆ 50 ಸಾವಿರದಿಂದ ಒಂದೂವರೆ ಲಕ್ಷದವರೆಗೆ ಡೊನೇಷನ್ ಪಡೆದುಕೊಳ್ಳಲು ಅವಕಾಶವಾಯಿತು. ಅಲ್ಲದೆ ಕಡಿಮೆ ಅಂಕ ಗಳಿಸಿದವರಿಗೂ ಸೀಟು ಸಿಗುವ ವ್ಯವಸ್ಥೆಯಾಯಿತು.
2003-04ರಲ್ಲಿ ಎನ್.ಸಿ.ಟಿ.ಇ.ಯು ಡಿ.ಇಡಿ ಮತ್ತು ಬಿ.ಇಡಿ ಶಿಕ್ಷಕರ ತರಬೇತಿ ಸಂಸ್ಥೆಗಳ ಗುಣಮಟ್ಟ ಸುಧಾರಣೆಗೆ ಕೆಲವು ಮಾನಕಗಳನ್ನು ರೂಪಿಸಿ, ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಈ ಸಂಸ್ಥೆಗಳಲ್ಲಿ ಬೋಧಿಸುವ ಉಪನ್ಯಾಸಕರ ಕನಿಷ್ಠ ವಿದ್ಯಾರ್ಹತೆ ಹಿಂದೆ ಬಿ.ಇಡಿ ಇದ್ದದ್ದನ್ನು ಉನ್ನತೀಕರಿಸಿ ಎಂ.ಇಡಿ ಸ್ನಾತಕೋತ್ತರ ಪದವಿಯನ್ನು ಕನಿಷ್ಠ ವಿದ್ಯಾರ್ಹತೆಯನ್ನಾಗಿ ಕಡ್ಡಾಯ ಮಾಡಲಾಯಿತು. ಇದರಿಂದ ಇಡೀ ರಾಷ್ಟ್ರ ದಲ್ಲಿ ಎಂ.ಇಡಿ ಸ್ನಾತಕೋತ್ತರ ಪದವಿಗೆ ಬೇಡಿಕೆ ಹೆಚ್ಚಾಯಿತು. ಇದರ ಪರಿಣಾಮವಾಗಿ ರಾಜ್ಯದ ವಿ.ವಿ.ಗಳು ತಮ್ಮ ಅಧೀನದ ಶಿಕ್ಷಣ ಸಂಸ್ಥೆಗಳಿಗೆ ಎಂ.ಇಡಿ ಸ್ನಾತಕೋತ್ತರ ಪದವಿ ಕಾಲೇಜುಗಳನ್ನು ಅಗತ್ಯಕ್ಕಿಂತ ಹೆಚ್ಚು ಆರಂಭಿಸಲು ಅನುಮತಿ ನೀಡಿದವು. ಇದರಿಂದ ಇವು ಸಹ ಇಂದು ಡಿ.ಇಡಿ ಕಾಲೇಜುಗಳಂತೆ ವಿದ್ಯಾರ್ಥಿಗಳಿಲ್ಲದೆ ಅನಾಥವಾಗುತ್ತಿವೆ.
ಸ್ವಯಂ ಬಂದ್
2003-04ರ ನಂತರ ಡಿ.ಇಡಿ ಕಾಲೇಜುಗಳ ಸಂಖ್ಯೆ ಅತ್ಯಂತ ಹೆಚ್ಚಿದ್ದು 1016 ಕಾಲೇಜುಗಳಲ್ಲಿ ಪ್ರಥಮ ವರ್ಷಕ್ಕೆ ಪ್ರತಿ ಕಾಲೇಜಿನಲ್ಲಿ 50 ವಿದ್ಯಾರ್ಥಿಗಳಂತೆ ರಾಜ್ಯದಲ್ಲಿ ಒಟ್ಟು 50- 60 ಸಾವಿರ ವಿದ್ಯಾರ್ಥಿಗಳಿಗೆ ಪ್ರವೇಶ ಪಡೆಯಲು ಅವಕಾಶವಿತ್ತು. ನಂತರ ಬೇಡಿಕೆ ಕಡಿಮೆಯಾದಂತೆ ಕಾಲೇಜುಗಳು ಸ್ವಯಂ ಬಂದ್ ಆಗುತ್ತಾ ಬಂದವು. 2010ರಲ್ಲಿ 1002 ಕಾಲೇಜುಗಳು, 2010-11 ನೇ ಸಾಲಿನಲ್ಲಿ 916 ಕಾಲೇಜುಗಳಿದ್ದು, 2013-14 ನೇ ಸಾಲಿನಲ್ಲಿ ಅವುಗಳ ಸಂಖ್ಯೆ 824ಕ್ಕೆ ಇಳಿದಿರುವುದು ಅವನತಿಯ ಮುನ್ಸೂಚನೆಯಂತಿದೆ.
ಇವುಗಳಲ್ಲಿ ರಾಜ್ಯ ಮಟ್ಟದಲ್ಲಿ ತರಬೇತಿ ನೀಡುತ್ತಿರುವ 29 ಡಯಟ್, 14 ಸರ್ಕಾರಿ, 42 ಅನುದಾನಿತ ಮತ್ತು 759 ಅನುದಾನರಹಿತ ಸಂಸ್ಥೆಗಳು ಸೇರಿವೆ. ಸರ್ಕಾರಿ ಕೋಟಾದಲ್ಲಿ 28,000 ಅಭ್ಯರ್ಥಿಗಳ ತರಬೇತಿಗೆ ಅವಕಾಶವಿದೆ. ಆದರೂ ಈ ವರ್ಷ ಇಡೀ ರಾಜ್ಯದಲ್ಲಿ ಅರ್ಜಿ ಸಲ್ಲಿಸಿರುವವರ ಸಂಖ್ಯೆಯೇ ಕೇವಲ 1,182. ಬಹಳಷ್ಟು ಕಾಲೇಜುಗಳಿಗೆ ಒಂದು ಅರ್ಜಿಯೂ ಸಲ್ಲಿಕೆ ಆಗಿಲ್ಲ. ಆಕಾಂಕ್ಷಿಗಳ ಸಂಖ್ಯೆ ಯಾರೂ ಊಹಿಸಲಾರದಷ್ಟು ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಿದ್ದರಿಂದ ಬಹಳಷ್ಟು ಕಾಲೇಜುಗಳು ತಂತಾನೇ ಮುಚ್ಚಿಕೊಳ್ಳುತ್ತಿವೆ. ಹೀಗಾಗಿ ಪ್ರಾಥಮಿಕ ಶಿಕ್ಷಣದ ಬುನಾದಿಯಾಗಿರುವ ಡಿ.ಇಡಿ ಕಾಲೇಜುಗಳ ಗತಿ ಮುಂದೇನು ಎಂಬಂತಾಗಿದೆ.
ಡಿ.ಇಡಿ ಕಾಲೇಜುಗಳ ಈ ಸ್ಥಿತಿಗೆ ಸಾವಿರಾರು ಸಂಸ್ಥೆಗಳನ್ನು ಆರಂಭಿಸಲು ಅವಕಾಶ ನೀಡಿದ್ದು, ಡಿ.ಇಡಿ ತರಬೇತಿ ಪಡೆದವರು ಕೇವಲ ಕಿರಿಯ ಪ್ರಾಥಮಿಕ ಶಾಲೆಗೆ ಮಾತ್ರ ಶಿಕ್ಷಕರಾಗಲು ಅವಕಾಶ ಇರುವುದು, ವರ್ಷಕ್ಕೆ 50 ಸಾವಿರಕ್ಕಿಂತ ಹೆಚ್ಚು ಮಂದಿ ತರಬೇತಿ ಪಡೆದು ಹೊರಬರುತ್ತಿರುವುದು, ಎರಡು ಮೂರು ವರ್ಷಕ್ಕೊಮ್ಮೆ 3- 4 ಸಾವಿರ ಸಂಖ್ಯೆಯಷ್ಟು ನೇಮಕಾತಿ ಮಾತ್ರ ಆಗುತ್ತಿರುವುದು, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆ ಆಗುತ್ತಿರುವುದು, ಸುಮಾರು 12,000 ಶಾಲೆಗಳಲ್ಲಿ ಹೆಚ್ಚುವರಿ ಶಿಕ್ಷಕರು ಇರುವುದು, ಖಾಸಗಿ ಆಂಗ್ಲ ಮಾಧ್ಯಮ, ಕೇಂದ್ರೀಯ ಪಠ್ಯಕ್ರಮ ಹೊಂದಿರುವ ಶಾಲೆಗಳಿಗೇ ಹೆಚ್ಚು ಮಕ್ಕಳು ಸೇರುತ್ತಿರುವುದು, ಗುತ್ತಿಗೆ ಅಥವಾ ಗೌರವ ಶಿಕ್ಷಕರ ನೇಮಕ, ಡಿ.ಇಡಿ ಪ್ರವೇಶಕ್ಕೆ ಸಾಮಾನ್ಯ ವರ್ಗದವರಿಗೆ ಕನಿಷ್ಠ ಶೇ 50 ಅಂಕ ನಿರ್ಧರಿಸಿರುವುದು ಇತ್ಯಾದಿಗಳು ಬಹು ಮುಖ್ಯವಾದ ಕಾರಣಗಳಾಗಿವೆ.
ಸಂವಿಧಾನದ ಪ್ರಕಾರ, 6ರಿಂದ 14 ವರ್ಷದ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಮೂಲಭೂತ ಹಕ್ಕು. ಹಾಗಾಗಿ ಪ್ರಾಥಮಿಕ ಶಿಕ್ಷಕರ ತರಬೇತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಈ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಬೇಕು. ಈ ಮೂಲಕ, ಮುಂಚಿನಂತೆಯೇ ಈ ತರಬೇತಿಗೆ ಬೇಡಿಕೆ ಸೃಷ್ಟಿಯಾಗಿ ಹೆಚ್ಚಿನ ವಿದ್ಯಾರ್ಥಿಗಳು ಇದರತ್ತ ಆಕರ್ಷಿತರಾಗುವಂತೆ ಮಾಡಬೇಕು.

No comments:

Post a Comment