Friday 23 August 2013

ಇನ್ರ್‌ಸ್ಫೈರ್ ಅವಾರ್ಡ್ ಯಾಕೀ ಆಭಾಸ?


ಜಾಗತಿಕ ಮಟ್ಟದಲ್ಲಿ ದೇಶದ ವಿಜ್ಞಾನಿಗಳ ಸಾಧನೆ ಅತ್ಯುನ್ನತ ಮಟ್ಟದಲ್ಲಿ ಇದೆ. ಆದರೆ ವಿಜ್ಞಾನ ಸಂಶೋಧನೆಯಲ್ಲಿ ಮಾತ್ರ ನಮ್ಮ ಸಾಧನೆಯು, ಜನಸಂಖ್ಯೆ ಮತ್ತು ವಿಸ್ತಾರದಲ್ಲಿ ಚಿಕ್ಕದಾದ ಜಪಾನ್‌ನ ಸಂಶೋಧನೆಯ ಮಟ್ಟಕ್ಕಿಂತ ತುಂಬಾ ಕೆಳ ಸ್ತರದಲ್ಲಿ ಇದೆ.
ಇದರಿಂದ, ಪ್ರತಿಭಾನ್ವಿತ ವಿದ್ಯಾರ್ಥಿಗಳು ವಿಜ್ಞಾನ ಸಂಶೋಧನಾ ಕ್ಷೇತ್ರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿಲ್ಲ ಎಂಬುದನ್ನು ಮನಗಂಡ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ 2008ರಲ್ಲಿ ಒಂದು ವಿಶಿಷ್ಟ ಯೋಜನೆಯನ್ನು ಜಾರಿಗೆ ತಂದಿದೆ. ಅದೇ ““INSPIRE”  ((Innovation in Science Pursuit for Inspired Research). ಇದರ ಮೂಲ ಉದ್ದೇಶ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಸಂಶೋಧನೆಯಲ್ಲಿ ಆಸಕ್ತಿ ಮೂಡಿಸುವುದು. ಈಗಿರುವ ಶೈಕ್ಷಣಿಕ ವ್ಯವಸ್ಥೆಯ ಮೂಲಕವೇ ಪ್ರತಿಭಾವಂತರನ್ನು ಗುರುತಿಸಿ ಉತ್ತೇಜನ ನೀಡುವ ಉದಾತ್ತ ಆಶಯವನ್ನು ಈ ಯೋಜನೆ ಹೊಂದಿದೆ.
ಪ್ರಾಥಮಿಕ, ಪ್ರೌಢಶಾಲಾ ಹಂತದಲ್ಲಿ ದೇಶದ ಪ್ರತಿ ಶಾಲೆಯಲ್ಲಿ 6ರಿಂದ 10ನೇ ತರಗತಿವರೆಗಿನ ಇಬ್ಬರು ಪ್ರತಿಭಾನ್ವಿತರಿಗೆ ತಲಾ 5000 ರೂಪಾಯಿ ಸಹಾಯಧನ ನೀಡಿ, ಆ ಮೂಲಕ ಅವರು ಸೃಜನಾತ್ಮಕವಾದ ವೈಜ್ಞಾನಿಕ ಯೋಜನೆಯಲ್ಲಿ ತೊಡಗಿಕೊಳ್ಳಲು ಮತ್ತು ಕ್ರಿಯಾತ್ಮಕ ವಿಜ್ಞಾನದ ಮಾದರಿಯನ್ನು ತಯಾರಿಸಲು ಯೋಜನೆ ಪ್ರೇರೇಪಿಸುತ್ತದೆ. ಅವರ ಈ ಸೃಜನಾತ್ಮಕ ವಿಜ್ಞಾನ ಮಾದರಿಯನ್ನು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಿಜ್ಞಾನ ಪ್ರದರ್ಶನಗಳಲ್ಲಿ ಪ್ರದರ್ಶಿಸುವ ವ್ಯವಸ್ಥೆ ಮಾಡಲಾಗುತ್ತದೆ. ಈ ಯೋಜನೆಯಡಿ ನಮ್ಮ ರಾಜ್ಯಕ್ಕೆ ಎರಡು ಹಂತಗಳಲ್ಲಿ ಸುಮಾರು 70 ಕೋಟಿಯಷ್ಟು ಹಣ ಬಿಡುಗಡೆಯಾಗಿದೆ. 71,432 ವಿದ್ಯಾರ್ಥಿಗಳು ಇದರ ಫಲಾನುಭವಿಗಳಾಗಿದ್ದಾರೆ. 2020ರ ಹೊತ್ತಿಗೆ ದೇಶವನ್ನು ಜ್ಞಾನ ಸಮೃದ್ಧ ರಾಷ್ಟ್ರವನ್ನಾಗಿಸುವ ನಿಟ್ಟಿನಲ್ಲಿ ಒಂದು ದೂರದೃಷ್ಟಿಯ ಯೋಜನೆ ಇದಾಗಿದೆ.
ಆದರೆ... ಇತ್ತೀಚೆಗೆ ನಾನು ಜಿಲ್ಲಾ ಮಟ್ಟದ ಎರಡು`ಇನ್ಸ್‌ಪೈರ್ ಅವಾರ್ಡ್' ವಿಜ್ಞಾನ ಮಾದರಿ ಪ್ರದರ್ಶನಗಳಿಗೆ ಮುಖ್ಯ ತೀರ್ಪುಗಾರಳಾಗಿ ಭಾಗವಹಿಸಿದ್ದೆ. ಈ ಕಾರ್ಯಕ್ರಮ ಮಕ್ಕಳ ಸೃಜನಶೀಲತೆಯ ಪ್ರದರ್ಶನದ ಬದಲು, ವಿಜ್ಞಾನದ ಸಿದ್ಧ ಮಾದರಿಗಳ ಒಂದು ಮೇಳ ಎಂಬಂತೆ ನನಗೆ ಭಾಸವಾಯಿತು. ಅಲ್ಲಿ ಜನಪ್ರಿಯ ವಿಜ್ಞಾನ ಸಿದ್ಧಾಂತಗಳನ್ನು ಬಿಂಬಿಸುವ ಮಾದರಿಗಳು ಪ್ರದರ್ಶನಗೊಂಡಿದ್ದವು. ಮಕ್ಕಳ ಕ್ರಿಯಾಶಕ್ತಿಗೆ ಪ್ರದರ್ಶನದಲ್ಲಿ ಅವಕಾಶ ಇರಲಿಲ್ಲ. ಅಲ್ಲಿ ಪ್ರದರ್ಶನಗೊಂಡಿದ್ದ ಶೇ 99 ಮಾದರಿಗಳು ಮಾರುಕಟ್ಟೆಯಿಂದ ಖರೀದಿಸಿ ತಂದವಾಗಿದ್ದವು.
ಇನ್ನೂ ತಮಾಷೆಯ ಸಂಗತಿ ಎಂದರೆ `ಇನ್ಸ್‌ಪೈರ್ ಅವಾರ್ಡ್' ಯೋಜನೆಗಾಗಿ ವಿಜ್ಞಾನದ ಸಿದ್ಧ ಮಾದರಿಗಳನ್ನು ತಯಾರಿಸಿ ಕೊಡುವ ಸಲುವಾಗಿಯೇ ಅನೇಕ ಸಂಸ್ಥೆಗಳು ಹುಟ್ಟಿಕೊಂಡಿರುವುದು. ಅವು ಪ್ರದರ್ಶನದ ಎರಡು ತಿಂಗಳ ಮೊದಲೇ ಎಲ್ಲ ಶಾಲೆಗಳಿಗೆ ತೆರಳಿ ತಮ್ಮಲ್ಲಿ ದೊರೆಯುವ ವಿಜ್ಞಾನ ಮಾದರಿಗಳ ಬಗ್ಗೆ ಕರಪತ್ರಗಳನ್ನು ಹಂಚುತ್ತವೆ. ಹಾಗಾಗಿ ನಾನು ತೀರ್ಪುಗಾರಳಾಗಿದ್ದ ಎರಡು ಕೇಂದ್ರಗಳ ನಡುವೆ 125 ಕಿ.ಮೀ. ಅಂತರ ಇದ್ದರೂ, ಎರಡೂ ಕಡೆ ಪ್ರದರ್ಶನಗೊಂಡ ಮಾದರಿಗಳಲ್ಲಿ ಹೆಚ್ಚೇನೂ ವ್ಯತ್ಯಾಸ ಇಲ್ಲದೆ ಒಂದೇ ತೆರನಾಗಿದ್ದವು.
ಜಿಲ್ಲಾ ಮಟ್ಟದ ಈ ಎರಡೂ `ಇನ್ಸ್‌ಪೈರ್ ಅವಾರ್ಡ್' ವಿಜ್ಞಾನ ಪ್ರದರ್ಶನಗಳಲ್ಲಿ ಒಟ್ಟು 1200 ಮಾದರಿಗಳಿದ್ದವು. ಆದರೆ ಅವುಗಳಲ್ಲಿ ಬಹುತೇಕವು ಪುನರಾವರ್ತನೆಗೊಂಡಿದ್ದು, ಇನ್ಸ್‌ಪೈರ್ ಯೋಜನೆಯ ಮೂಲ ಉದ್ದೇಶಕ್ಕೆ ವಿಡಂಬನೆಯಂತೆ ಇದ್ದವು. ಅಲ್ಲಿ ನೆರೆದಿದ್ದ ಶಿಕ್ಷಕರಿಗೆ ಈ ಬಗ್ಗೆ ತಿಳಿವಳಿಕೆ ನೀಡಲು ಹೋದಾಗ ಇನ್ನೂ ಆಘಾತಕಾರಿ ವಿಷಯ ಬೆಳಕಿಗೆ ಬಂತು. ವಿದ್ಯಾರ್ಥಿಗಳಿಗೆ ಕೊಡಬೇಕಾದ 5000 ರೂಪಾಯಿ  ಸಹಾಯ ಧನದಲ್ಲಿ ಮುಖ್ಯೋಪಾಧ್ಯಾಯರು ಪ್ರದರ್ಶನದ ಎರಡು ದಿನ ಮೊದಲು, 2000 ರೂಪಾಯಿಯನ್ನು ಶಿಕ್ಷಕರಿಗೆ ಕೊಟ್ಟು ಅಂಗಡಿಯಿಂದ ವಿಜ್ಞಾನದ ಮಾದರಿಗಳನ್ನು ಕೊಂಡು ತಂದು ಪ್ರದರ್ಶಿಸುವಂತೆ ತಿಳಿಸಿದ್ದರು!
ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಎಷ್ಟೋ ವಿದ್ಯಾರ್ಥಿಗಳು ನೆಪ ಮಾತ್ರಕ್ಕೆ ಅಲ್ಲಿಗೆ ಬಂದಿದ್ದರು. ಅವರಿಗೆ ಸರಿಯಾದ ಊಟ- ವಸತಿ ವ್ಯವಸ್ಥೆ ಇಲ್ಲದ ಕಾರಣ ಒಂದೆರಡು ಗಂಟೆ ತಮ್ಮ ಮಾದರಿಗಳನ್ನು ಪ್ರದರ್ಶಿಸಿ ಎದ್ದು ಹೋದರು. ಅಂಗಡಿಯಿಂದ ಕೊಂಡು ತಂದ ಮಾದರಿಗಳಾದ್ದರಿಂದ ಹೆಚ್ಚಿನ ವಿದ್ಯಾರ್ಥಿಗಳಿಗೆ ತಮ್ಮ ಮಾದರಿಯನ್ನು ಪ್ರದರ್ಶಿಸುವ ಬಗ್ಗೆಯಾಗಲೀ, ಅದರ ಬಗ್ಗೆ ಮಾಹಿತಿ ಹೇಳುವ ಅಥವಾ ಅದರ ಫಲಿತಾಂಶದ ಬಗೆಗಾಗಲೀ ಕಿಂಚಿತ್ತೂ ಆಸಕ್ತಿ ಇರಲ್ಲ್ಲಿಲ. ಕೆಲವು ವಿದ್ಯಾರ್ಥಿಗಳು ಶಿಕ್ಷಕರು ಕಲಿಸಿದ ಗಿಳಿಪಾಠವನ್ನು ಒಪ್ಪಿಸುತ್ತಿದ್ದರು. ಕೆಲ ಶಿಕ್ಷಕರಂತೂ ವಿದ್ಯಾರ್ಥಿಗಳಿಗೆ ತೊಂದರೆಯನ್ನೇ ಕೊಡದೆ ತಾವೇ ವಿವರಿಸಲು ಮುಂದಾಗುತ್ತಿದ್ದರು!
ಇನ್ನು ಈ ವಿಜ್ಞಾನ ಪ್ರದರ್ಶನಗಳ ಆಯೋಜಕರು ತಮಗೆ ಬಂದ ಲಕ್ಷಗಟ್ಟಲೆ ಹಣದ ಬಹುಪಾಲನ್ನು ರಾಜಕಾರಣಿಗಳನ್ನು ಓಲೈಸುವ ಅದ್ದೂರಿ ಉದ್ಘಾಟನಾ ಸಮಾರಂಭಕ್ಕೇ ವ್ಯಯಿಸುತ್ತಾರೆ. ಹೀಗಾಗಿ ಅಲ್ಲಿ ವಿದ್ಯಾರ್ಥಿಗಳಿಗೆ ಸಂಶೋಧನೆಯಲ್ಲಿ ಒಲವು ಮೂಡಿಸುವ ಅಥವಾ ಅವರ ಸೃಜನಶೀಲತೆಯನ್ನು ಉತ್ತೇಜಿಸುವ ಯಾವ ಕಾರ್ಯಕ್ರಮವೂ ಕಂಡು ಬರಲಿಲ್ಲ. ಉದ್ಘಾಟನಾ ಸಮಾರಂಭಕ್ಕೆ ನೀಡುವ ಪ್ರಾಮುಖ್ಯತೆಯಿಂದಾಗಿ ವಿಜ್ಞಾನ ಮಾದರಿಗಳ ಪ್ರದರ್ಶನವನ್ನು ಕಿರಿದಾದ ಜಾಗದಲ್ಲಿ ನೆಪಮಾತ್ರಕ್ಕೆ ಏರ್ಪಾಡು ಮಾಡಿದಂತಿತ್ತು. ಬೇಸರದ ಸಂಗತಿಯೆಂದರೆ, ಅಲ್ಲಿ ಮಕ್ಕಳಿಗೆ ಕನಿಷ್ಠ ಮೂಲಭೂತ ವ್ಯವಸ್ಥೆಯೂ ಇರಲಿಲ್ಲ.
ಇದೆಲ್ಲವನ್ನೂ ನೋಡಿದಾಗ ನಾವೆಲ್ಲಿಗೆ ಹೋಗುತ್ತಿದ್ದೇವೆ ಎಂಬುದೇ ಅರ್ಥವಾಗುತ್ತಿಲ್ಲ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕೋಟಿಗಟ್ಟಲೆ ಹಣ ಮಕ್ಕಳಲ್ಲಿ ಸೃಜನಾತ್ಮಕ ಶಕ್ತಿಯನ್ನು ಜಾಗೃತಗೊಳಿಸುವ ಬದಲು ಅಪವ್ಯಯವಾಗುತ್ತಿದೆ ಎನಿಸುತ್ತಿದೆ. ಸರ್ಕಾರದ ಇತರ ಇಲಾಖೆಗಳ ಕಾರ್ಯವೈಖರಿಯಂತೆ ಶಿಕ್ಷಣ ಇಲಾಖೆಯೂ ಜಡ್ಡುಗಟ್ಟಿ, ಸರ್ಕಾರದ ಯೋಜನೆಗಳನ್ನು ಆಚರಣೆಗೆ ಮಾತ್ರ ಸೀಮಿತಗೊಳಿಸಿದೆಯೇನೋ ಎಂದು ಭಾಸವಾಗುತ್ತದೆ. ಇನ್ನು ಶಿಕ್ಷಕರು ತಮ್ಮ ದೈನಂದಿನ ಪಾಠ ಪ್ರವಚನಗಳಿಗೆ ಸಹಾಯ ಆಗುವಂತಹ ವಿಜ್ಞಾನ ಮಾದರಿಗಳನ್ನು ಖರೀದಿಸಿ ವಿದ್ಯಾರ್ಥಿಗಳ ಮೂಲಕ ಪ್ರದರ್ಶಿಸಿದ್ದಾರೆ. ಇದರಿಂದ ನಮ್ಮ ಪ್ರತಿಭಾವಂತ ಶಿಕ್ಷಕರ ಕ್ರಿಯಾಶೀಲತೆ ಬಗ್ಗೆಯೇ ಅನುಮಾನ ಪಡುವಂತಾಗಿದೆ.
ಕೆಲ ವಿದ್ಯಾರ್ಥಿಗಳು ಸ್ವಾಭಾವಿಕವಾಗಿ ಎಳವೆಯಲ್ಲಿ ಪ್ರಾಯೋಗಿಕ ಮತ್ತು ವೈಜ್ಞಾನಿಕ ವಿಷಯಗಳಿಂದ ಆಕರ್ಷಿತರಾಗುತ್ತಾರೆ. ಶಿಕ್ಷಕರು ಮತ್ತು ಪೋಷಕರು ಅಂತಹ ವಿಭಿನ್ನ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಪ್ರಯೋಗಶೀಲತೆ ಹಾಗೂ ತಾರ್ಕಿಕ ಚಿಂತನೆಗಳನ್ನು ಪೋಷಿಸಿದರೆ ಮಾತ್ರ ಮುಂದೆ ದೇಶ ವೈಜ್ಞಾನಿಕ ಪ್ರಗತಿ ಸಾಧಿಸಲು ಸಾಧ್ಯ.
ಭವಿಷ್ಯದಲ್ಲಿ ಉತ್ತಮ ಗುಣಮಟ್ಟದ ವಿಜ್ಞಾನಿಗಳನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಪ್ರಮುಖವಾದುದು. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಇನ್ಸ್‌ಪೈರ್‌ನ ಮೂಲ ಉದ್ದೇಶ ಹಾಗೂ ನಿರೀಕ್ಷಿತ ಪರಿಣಾಮ ಸಾಧಿಸುವ ನಿಟ್ಟಿನಲ್ಲಿ ಕಾರ್ಯಾಗಾರಗಳನ್ನು ಆಯೋಜಿಸಬೇಕು. ಆ ಮೂಲಕ, ಯೋಜನೆಯ ಬಗ್ಗೆ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಗೆ ಮಾರ್ಗದರ್ಶನ ನೀಡಬೇಕಾದ ಅಗತ್ಯ ಇದೆ. ಇಲ್ಲವಾದಲ್ಲಿ `ಇನ್ಸ್‌ಪೈರ್ ಅವಾರ್ಡ್' ಸಹ ಸರ್ಕಾರದ ಇತರ ಕೆಲವು ನಿಷ್ಪ್ರಯೋಜಕ ಯೋಜನೆಗಳಂತೆ ಆಗುವುದರಲ್ಲಿ ಸಂಶಯ ಇಲ್ಲ.
ಏಕರೂಪದ ಮಾದರಿ
ಎರಡು ಜಿಲ್ಲಾ ವಿಜ್ಞಾನ ಪ್ರದರ್ಶನಗಳಲ್ಲಿ ಪುನರಾವರ್ತನೆಗೊಂಡಿದ್ದ ವಿಜ್ಞಾನದ ಸಿದ್ಧ ಮಾದರಿಗಳು ಇಂತಿವೆ:
ಸೌರವ್ಯೆಹ, ಹೃದಯ, ಜೀರ್ಣಾಂಗ ವ್ಯೆಹ, ಮಾನವನ ಅಂಗ ರಚನೆ, ಬಹು ಉಪಯೋಗಿ ಸೌರಶಕ್ತಿ, ಮಳೆ ನೀರು ಸಂಗ್ರಹ, ಅಂತರ್ಜಲ ನಿರ್ವಹಣೆ, ಪವನ ಶಕ್ತಿಯಿಂದ ವಿದ್ಯುತ್, ಜಲ ವಿದ್ಯುತ್ ಯೋಜನೆಗಳ ಮಾದರಿ, ಪರಿಸರ ಮಾಲಿನ್ಯ, ಶಕ್ತಿಯ ರೂಪಾಂತರ, ವೇಗ ನಿಯಂತ್ರಕ ರಸ್ತೆ ಉಬ್ಬಿನಿಂದ ವಿದ್ಯುತ್, ಚಲನೆಯ ಮಾದರಿಗಳು, ಚಂದ್ರ ಮತ್ತು ಸೂರ್ಯ ಗ್ರಹಣ, ನೀರಿನ ಮಟ್ಟ ಸೂಚ್ಯಂಕ ಪ್ರಮುಖವಾದವು.

No comments:

Post a Comment