Thursday, 30 August 2012

ಶಿಕ್ಷಕರು ಹೀಗಿರಬೇಕು..

 ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕ, ವಿದ್ಯಾರ್ಥಿ ಹಾಗೂ ಕಲಿಕಾ ಪರಿಸರ ಈ ಮೂರು ಶೃಂಗಗಳು ಸಮನ್ವಯಗೊಂಡಲ್ಲಿ ಮಾತ್ರ ಕಲಿಕೆ ಪರಿಣಾಮಕಾರಿಯಾಗಬಲ್ಲುದು. ವಿದ್ಯಾರ್ಥಿಗಳಲ್ಲಿ ಅಪೇಕ್ಷಿತ ವರ್ತನೆಯನ್ನು ಉಂಟು ಮಾಡಲು ಶಿಕ್ಷಕ ತನ್ನನ್ನು ತಾನು ಪರಿಷ್ಕೃತಗೊಳಿಸುತ್ತ ಕಲಿಕಾ ಪರಿಸರವನ್ನು ಆರೋಗ್ಯಕರ ಪರಿಸರವನ್ನಾಗಿ ಮಾಡಬೇಕಾಗಿದೆ.
ಮೂರು ಪ್ರಶ್ನೆಗಳು:
           ಶಿಕ್ಷಕರಾದವರು ಹಾಗೂ ಶಿಕ್ಷಕರಾಗ ಬಯಸುವವರು ತಮಗೆ ತಾವೇ ಕೇಳಿಕೊಳ್ಳಬೇಕಾದ ಪ್ರಮುಖ ಪ್ರಶ್ನೆಗಳೀವೆ ಎಂದು ಅಭಿಪ್ರಾಯ ಪಡುತ್ತಾರೆ ಖ್ಯಾತ ಶಿಕ್ಷಣ ತಜ್ಞರಾದ ಡಾ.ಗುರುರಾಜ ಕರ್ಜಗಿ. ಈ ಮೂರು ಪ್ರಶ್ನೆಗಳಿಗೆ ನಿಮ್ಮ ಉತ್ತರ 'ಹೌದು' ಎಂದಾದರೆ ಮಾತ್ರ ಶಿಕ್ಷಕರಾಗಲು ಸೂಕ್ತ.
ಆ ಪ್ರಶ್ನೆಗಳು ಹೀಗಿವೆ:
ಪ್ರ1.ನಾನು ಕಲಿಸಬೇಕಾದ ವಿಷಯದ ಬಗ್ಗೆ ನನಗೆ ಸೂಕ್ತ ತಿಳುವಳಿಕರ ಇದೆಯೇ?
ಪ್ರ2. ನಾನು ನನ್ನ ವೃತ್ತಿಯನ್ನು ನಿಜವಾಗಿಯೂ ಪ್ರೀತಿಸುತ್ತೆನೆಯೇ?
ಪ್ರ3. ನನ್ನ ವಿದ್ಯಾರ್ಥಿಗಳನ್ನು ನಾನು ನನ್ನ ಸ್ವಂತ ಮಕ್ಕಳಂತೆಯೇ ಕಾಣುತ್ತೇನೆಯೇ?
   ಈ ಮೂರು ಪ್ರಶ್ನೆಗಳಿಗೆ ನಮ್ಮ ಉತ್ತರ ಹೌದಾದರಷ್ಟೇ ಸಾಲದು. ಉತ್ತಮ ಶಿಕ್ಷಕನಾಗಲು ಇನ್ನೂ ಕೆಲವು ಅಂಶಗಳಿವೆ. ಅವು ಹೀಗಿವೆ:
1.ಕಲಿಸುವ ಜಾಣ್ಮೆ :
ತಾನು ಕಲಿಸಬೇಕಾದ ವಿಷಯವನ್ನು ತನ್ ವಿದ್ಯಾರ್ಥಿಗಳಿಗೆ ಸೂಕ್ತ ರೀತಿಯಲ್ಲಿ ತಲುಪಿಸುವ ಜಾಣ್ಮೆ ಶಿಕ್ಷಕನಿಗಿರಬೇಕು.
2.ವಿದ್ಯಾರ್ಥಿಗಳ ಬಗೆಗಿನ ಪ್ರೀತಿ :
ವಿದ್ಯಾರ್ಥಿಗಳ ಮೇಲೆ ಅತೀವವಾದ ಪ್ರೀತಿ ಶಿಕ್ಷಕನಿಗಿರಬೇಕು. ಯಾವುದೇ ರೀತಿಯ ಚಟುವಟಿಕೆಗಳು ಪ್ರೀತಿಯಿಂದಲೇ ಸಾಗಿಸುವಂತಹ ಕಲೆ ಗೊತ್ತಿರಬೇಕು.
3.ವಿಷಯದ ಬಗೆಗಿನ ಪ್ರೀತಿ :
ಶಿಕ್ಷಕ ತಾನು ಕಲಿಸುವ ವಿಷಯವನ್ನು ಪ್ರೀತಿಸಬೇಕು. ಏಕೆಂದರೆ ಒಂದು ವಿಷಯದ ಬಗೆಗಿನ ಪ್ರೀತಿ ಕಲಿಕೆಯನ್ನು ಪರಿಣಾಮಕಾರಿಯಾಗಿಸಬಲ್ಲುದು.
4.ಮಕ್ಕಳ ಬದುಕಿನಲ್ಲಿ ಶಾಲೆಯ ಮಹತ್ವವನ್ನು ಅರಿಯುವುದು :
ಶಿಕ್ಷಕರಾದವರು ತಮ್ಮ ವಿದ್ಯಾರ್ಥಿಗಳ ಬದುಕಿನಲ್ಲಿ ಶಾಲೆ ಯಾವ ರೀತಿ ಮಹತ್ವವಳ್ಳದ್ದಾಗಿದೆ ಎಂಬುದನ್ನು ಅರಿಯಬೇಕು. ಶಾಲಾ ಆವರಣ, ಆಟಗಳು, ಪಾಠಗಳು - ಹೀಗೆ ಶಾಲೆ ಮಕ್ಕಳನ್ನು ಯಾವ ಯಾವ ಕ್ಷೇತ್ರಗಳಲ್ಲಿ ಬಲಯುತಗೊಳಿಸಬಹುದೆಂಬುದನ್ನು ಶಿಕ್ಷಕರು ಅರಿತಿರಬೇಕು. ಇದರಿಂದ ಶಿಕ್ಷಕರಿಗೆ ತಮ್ಮ ಕಾರ್ಯಕ್ಷೇತ್ರದ ಅರಿವಾಗುತ್ತದೆ.
5.ಬದಲಾಯಿಸುವ ಇಚ್ಛಾಶಕ್ತಿ :
'ನಾನು ನನ್ನ ವಿದ್ಯಾರ್ಥಿಗಳನ್ನು ಧನಾತ್ಮಕವಾಗಿ ಬದಲಾಯಿಸಬಲ್ಲೆ' ಎಂಬ ಮನೋಭಾವ ಮತ್ತು ಅದರೆಡೆಗಿನ ಇಚ್ಛಾಶಕ್ತಿ ಶಿಕ್ಷಕನಿಗಿರಬೇಕು. ಮೊದಮೊದಲು ಕಲಿಕಾ ಕೊರತೆ, ಶೈಕ್ಷಣಿಕ ಕೊರತೆ ಹಾಗೂ ಭೌತಿಕ ಕೊರತೆಗಳನ್ನು ಗಮನಿಸಿ ಅದನ್ನು ಬದಲಾಯಿಸಬಲ್ಲ ಇಚ್ಛಾಶಕ್ತಿ ಪ್ರಬಲವಾದಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸಬಲ್ಲುದು.
6.ಪ್ರತಿಫಲಿಸುವ ಇಚ್ಛಾಶಕ್ತಿ :
ವಿದ್ಯಾರ್ಥಿ ಶಾಲೆಯಲ್ಲಿ  ಕಲಿತ ವಿಷಯವನ್ನು ಸಮಾಜದ ಆಗು ಹೋಗುಗಳೊದಿಗೆ ತಾಳೆ ನೋಡಿ ಧನಾತ್ಮಕವಾಗಿ ವರ್ತಿಸಿದರೆ ಶಿಕ್ಷಣದ ಗುಣಗಳು ಪ್ರತಿಫಲಿಸಿವೆ ಎಂದರ್ಥ.ಒಂದು ಸಮಾಜ ಹೇಗೆ ಇರಬೇಕು ಎಂಬುದನ್ನು ಶಿಕ್ಷಕ ನಿರ್ಧರಿಸಿ ಅದನ್ನು ಶಿಕ್ಷಕ ತನ್ನ ವಿದ್ಯಾರ್ಥಿಗಳ ಮೂಲಕ ಪ್ರತಿಫಲಿಸಬೇಕು.
7.ಸಂಘಟನಾ ಗುಣ:
ವಿದ್ಯಾರ್ಥಿಗಳನ್ನು ಒಂದು ಉತ್ತಮ ಭವಿಷ್ಯಕ್ಕಾಗಿ ಸಂಘಟಿಸುವ ಗುಣ ಶಿಕ್ಷಕನಿಗಿರಬೇಕು. ಅದಕ್ಕಾಗಿ ಸೇವಾದಲ, ಸ್ಕೌಟ್ಸ್ ಆ್ಯಂಡ್ ಗೈಡ್ಸ್, ಎನ್ ಸಿ ಸಿ ಯಂತಹ ಚಟುವಟಿಕೆಗಳನ್ನು ನಡೆಸಬೇಕು.
8. ಸಹೋದ್ಯೋಗಿ ಮತ್ತು ಸಮಾಜದ ಇತರರನ್ನು ಅರಿಯುವುದು:
ಶಿಕ್ಷಕರಾದವರು ತಮ್ಮ ಜೊತೆಗೆ ಸೇವೆ ಸಲ್ಲಿಸುವ ಹಾಗೂ ಸಮಾಜದ ಇತರ ವ್ಯಕ್ತಿಗಳೊಂದಿಗೆ ಉತ್ತಮವಾಗಿ ಹಾಗೂ ಶಾಂತವಾಗಿ ವ್ಯವಹರಿಸುವ ಗುಣ ಶಿಕ್ಷಕರಿಗಿರಬೇಕು.

     ಇವು ಶಿಕ್ಷಕರಿಗಿಬೇಕಾದ ಕನಿಷ್ಠ ಗುಣಗಳು ಎಂದರೆ ತಪ್ಪಾಗಲಾರದು. ಶಿಕ್ಷಕರ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ಎಲ್ಲ ಶಿಕ್ಷಕರು ಈ ಗುಣಗಳನ್ನು ಅಳವಡಿಸಿಕೊಳ್ಳಲಿ ಎಂದು ಹಾರೈಸುತ್ತ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.










No comments:

Post a Comment