Monday 23 November 2015

ಪ್ರತಿಯೊಬ್ಬರೂ ನೋಡಲೇ ಬೇಕಾದ ಚಿತ್ರ -- ಪ್ರಸೆಂಟ್ ಸಾರ್ --ಡಿ.ಎಂ.ಪ್ರಶಾಂತ ಕುರ್ಕೆ

ವಿದ್ಯಾರ್ಥಿಗಳ ಹಾಜರಾತಿ ಕೊರತೆಯ
ಕಾರಣದಿಂದ ಸರ್ಕಾರಿ ಶಾಲೆಗಳನ್ನು
ಮುಚ್ಚುವ ಪರಿಸ್ಥಿತಿಯನ್ನು
ಕಟ್ಟಿಕೊಡುವ ಕಿರುಚಿತ್ರ ಆಕರ್ಷ ಕಮಲ
ನಿರ್ದೇಶನದ 'ಪ್ರಸೆಂಟ್ ಸಾರ್'.
ಗಡಿನಾಡಿನ ಕನ್ನಡ ಶಾಲೆಗಳ ಪರಿಸ್ಥಿತಿ
ಅವಲೋಕಿಸುತ್ತಲೇ ಈ ಭಾಗದಲ್ಲಿ
ಕನ್ನಡ ಭಾಷೆಯ ದುಸ್ಥಿತಿಗೆ ಕನ್ನಡಿ
ಹಿಡಿಯುತ್ತದೆ. ಗಡಿಭಾಗದಲ್ಲಿ ಕನ್ನಡ
ಅರೆಜೀವವಾಗುತ್ತಿದೆ. ಈ ಭಾಗದಲ್ಲಿ
ಶಾಲೆಯಲ್ಲಿ ಕಲಿತರಷ್ಟೆ ಕನ್ನಡ.
ಇಲ್ಲವಾದರೆ ಗಡಿಗೆ ಹೊಂದಿಕೊಂಡಿರುವ
ರಾಜ್ಯಗಳ ಭಾಷೆಯೇ
ಮಾತೃಭಾಷೆಯಾಗುತ್ತದೆ.
'ಪ್ರಸೆಂಟ್ ಸಾರ್' ಚಿಕ್ಕಬಳ್ಳಾಪುರ
ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ
ವಾಟದ ಹೊಸಹಳ್ಳಿ ಶಾಲೆಯ ಪರಿಸರದ
ಕಥೆ. ಈಗಡಿನಾಡಿನ ಶಾಲೆ ಒಂದು
ಪ್ರಾತಿನಿಧಿಕ ಅಷ್ಟೇ. ರಾಜ್ಯದ ಬೇರೆ
ಬೇರೆ ಭಾಗಗಳಲ್ಲೂ ಹಾಜರಾತಿ
ಕೊರತೆಯಿಂದ ಶಾಲೆಗಳನ್ನು ಮುಚ್ಚುವ
ಸ್ಥಿತಿಯನ್ನು ಇದು
ಅಭಿವ್ಯಕ್ತಿಸುತ್ತದೆ.
ಎರಡನೇ ಮಹಾಯುದ್ಧದ ವೇಳೆ
ಶಾಲೆಯೊಂದರ ಮೇಲೆ ಆಗುವ
ಪರಿಣಾಮ ಹಾಗೂ ಅಲ್ಲಿಯ ಒಬ್ಬ
ಹುಡುಗನ ಸುತ್ತ ಫ್ರೆಂಚ್ ಲೇಖಕ
ಆಲ್ಫೋನ್ಸ್ ದೋದೆ ಹೆಣೆದಿರುವ
'ಲಾಸ್ಟ್ ಲೆಸೆನ್' ಸಣ್ಣ ಕಥೆಯನ್ನು
ಆಧರಿಸಿದ್ದು 'ಪ್ರಸೆಂಟ್ ಸಾರ್'.
ಮೂಲಕಥೆಯನ್ನು ಕಥೆಗಾರ ಕೇಶವ
ಮಳಗಿ 'ಕೊನೆಯ ಪಾಠ' ಹೆಸರಿನಲ್ಲಿ
ಕನ್ನಡಕ್ಕೆ ರೂಪಾಂತರಿಸಿದ್ದರು.
ಬೊಂಬೆಗಳ ಬಗ್ಗೆ ಆಸಕ್ತನಾಗಿರುವ
ಸಿದ್ದು ಎನ್ನುವ ಹುಡುಗನ ಪಾತ್ರದ
ಮೂಲಕ ಕಿರುಚಿತ್ರ ಸಾಗುತ್ತದೆ. ಜತೆಗೆ
ಕನ್ನಡದ ಶಿಕ್ಷಕರೊಬ್ಬರ ಭಾಷಾ
ಪ್ರೇಮದ ಕಳ್ಳು– ಬಳ್ಳಿ ನಂಟು. ಕನ್ನಡ
ಶಾಲೆಯ ಮುಚ್ಚುವಿಕೆಯ ಬಗ್ಗೆ
ಹೇಳುತ್ತಲೇ ಅಲ್ಲೊಂದು
ಸಕಾರಾತ್ಮಕ ಅಂಶಗಳನ್ನು ಬಿತ್ತಿ
ಬೆಳೆದಿದ್ದಾರೆ ನಿರ್ದೇಶಕರು.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ
ಅಂತರರಾಷ್ಟ್ರೀಯ
ಕಿರುಚಿತ್ರೋತ್ಸವ ಮತ್ತು ಸುಚಿತ್ರ
ಫಿಲ್ಮ್ ಸೊಸೈಟಿಯಲ್ಲಿ 'ಪ್ರಸೆಂಟ್ ಸಾರ್'
ಪ್ರದರ್ಶನಗೊಂಡಿತ್ತು. ಗೋಪಾಲಕೃಷ್ಣ
ಅಡಿಗರ 'ಎದೆಯು ಮರಳಿ ತೊಳಲುತಿದೆ...' ,
ಎಂ.ಆರ್. ಕಮಲ ಅವರ 'ಮುಗಿಲ ಮರೆಗೆ
ಸರಿದು ಮಿಂಚು ಮರಿಗಳೇ...' ಮೊದಲಾದ
ಅರ್ಥವಂತಿಕೆಯ ಪದ್ಯಗಳನ್ನು
ಚಿತ್ರಕಥೆಯ ಸಾರದೊಳಗೆ
ಬಳಸಿಕೊಂಡಿರುವುದು ಕಿರುಚಿತ್ರದ
ಹೆಚ್ಚುಗಾರಿಕೆ.
'ನನ್ನಮ್ಮ ಬಾಲ್ಯದ ಪ್ರತಿ
ಹಂತದಲ್ಲೂ ಭಾಷೆ ಬಗ್ಗೆ ಪ್ರೀತಿ, ಗೌರವ,
ಒಲವನ್ನು ಬೆಳೆಸಿದಳು. ಮನೆಯ
ದಿನನಿತ್ಯದ ಹರಟೆಗಳಲ್ಲೂ ಕನ್ನಡದ
ಸಿನಿಮಾ, ಭಾವಗೀತೆ, ಸಾಹಿತ್ಯ
ಸಂಬಂಧಿ ಚರ್ಚೆಗಳು ನಡೆಯುತ್ತಿದ್ದವು.
ಹೀಗೆ ಕನ್ನಡದ ಹಲವು ಮಾಧ್ಯಮಗಳ
ಬಗ್ಗೆ ತಿಳಿಯುತ್ತಾ ಹೋದೆ.
ದಿನಕ್ಕೊಂದು ಸಿನಿಮಾ ನೋಡುವುದು
ಇವತ್ತಿಗೂ ನನ್ನ ಅಭ್ಯಾಸ. ಅದು
ಯಾವುದೇ ಭಾಷೆಯಾದರೂ ಸರಿ.
ಸಿನಿಮಾ ಮಾಧ್ಯಮದ ಕಡೆ ಆಕರ್ಷಣೆ
ಬೆಳೆಯಿತು. ನಿರ್ದೇಶಕನಾಗುವ ಆಸೆ.
ಆದರೆ ಯಾವುದರ ಬಗ್ಗೆ ಕಥೆ
ಹೆಣಿಯುವುದು ಎನ್ನುವ ಜಿಜ್ಞಾಸೆ.
ಇತ್ತೀಚಿನ ದಿನಗಳಲ್ಲಿ ಕನ್ನಡದ
ಹಲವು ಪ್ರಮುಖ ಪತ್ರಿಕೆಗಳಲ್ಲಿ
ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ
ಬಗ್ಗೆ ಪ್ರಕಟವಾದ ಸುದ್ದಿಯಿಂದಾಗಿ
ಅವುಗಳ ಸ್ಥಿತಿ, ಮಾತೃಭಾಷೆ ಕಲಿಕೆ,
ಸರ್ಕಾರದ ನಿಲುವು ಹೀಗೆ ಚರ್ಚೆ
ಬಿರುಸಾಗಿತ್ತು.
ಇವುಗಳು ನನಗೆ ಮುಖ್ಯವಾದವು.
ಅದರಲ್ಲೂ ಕಡಿಮೆ ಸಮಯದಲ್ಲಿ ಹೆಚ್ಚು
ಖರ್ಚಿಲ್ಲದೆ ನನ್ನ ಕನಸನ್ನು
ಪರಿಣಾಮಕಾರಿಯಾಗಿ
ಸಾಕಾರಗೊಳಿಸಲು ಸುಂದರ
ಅವಕಾಶವಾಗಿ ಕಿರು ಚಿತ್ರ ನಿರ್ಮಾಣ
ಒದಗಿತು. ಇಂಗ್ಲಿಷ್ ಮಾಧ್ಯಮದಲ್ಲಿ
ಓದಿ, ಬರೆದು, ಹೊರದೇಶಗಳಿಗೆ ಹೋಗಿ
ಬೇರೆ ಭಾಷೆಗಳನ್ನು ಕಲಿತು ಕನ್ನಡ
ಭಾಷೆಯ ಉಳಿಯುವಿಕೆಯ ಬಗ್ಗೆ ಭಾಷಣ
ಬಿಗಿಯುವುದು ಎಷ್ಟು ಸಹಜ ಅನ್ನುವುದು
ನನಗೆ ನಾನೇ ಕೇಳಿಕೊಂಡ ಪ್ರಶ್ನೆ.
ಈ ಪ್ರಶ್ನೆಗೆ ಹಾಗೂ ಕನ್ನಡ
ಮಾಧ್ಯಮ ಶಾಲೆಗಳ ಬಗೆಗಿನ ಹಲವು
ಕುತೂಹಲಗಳಿಗೆ ಉತ್ತರ ಹುಡುಕುವ
ಪ್ರಯತ್ನ ನನ್ನ ಮೊದಲನೇ
ಕಿರುಚಿತ್ರ ಪ್ರೆಸೆಂಟ್ ಸಾರ್ '
ಎನ್ನುತ್ತಾರೆ ಆಕರ್ಷ. ರಾಜ್ಯದ
ಸರ್ಕಾರಿ ಶಾಲೆಗಳಲ್ಲಿ ಕಿರುಚಿತ್ರವನ್ನು
ಪ್ರದರ್ಶಿಸಬೇಕು ಎನ್ನುವ ಹಂಬಲ
ನಿರ್ದೇಶಕರದ್ದು.
ನವೀನ್ ಸಾಗರ್ ಅವರ ಕಥೆ–ಚಿತ್ರಕತೆಗೆ
ನಾವೀನ್ಯ ತುಂಬಿ ಹಾಜರಾತಿಯನ್ನು
ಅಂದಗೊಳಿಸಿರುವವರು
ಛಾಯಾಗ್ರಾಹಕರಾದ ಕುಮಾರ್ ಗೌಡ
ಮತ್ತು ಕಲಾ ನಿರ್ದೇಶಕರಾದ ಮಧುರಾ
ರಾಮನ್ ಮತ್ತು ಸ್ಪರ್ಶ. ಕಿರಣ್
ಮಿಡಿಗೇಶಿ ಸಂಕಲನ, ವಿಕಾಸ್ ವಸಿಷ್ಠ
ಸಂಗೀತ ಚಿತ್ರಕ್ಕಿದೆ. ಚಂದ್ರಮ್ಮ,
ರಾಘವೇಂದ್ರ, ಗೋಪಾಲಕೃಷ್ಣ
ದೇಶಪಾಂಡೆ 'ಪ್ರಸೆಂಟ್ ಸಾರ್'ನ
ಬಳಗದಲ್ಲಿದ್ದಾರೆ.
*
ಕನ್ನಡದ ಲೇಖಕಿ ಎಂ.ಆರ್. ಕಮಲ ಅವರ
ಮಗ ಆಕರ್ಷ. ಫ್ರಾನ್ಸ್ನಲ್ಲಿ ನೆಲೆಸಿರುವ
ಅವರು ವೃತ್ತಿಯಲ್ಲಿ ಎಂಜಿನಿಯರ್.
ಕೌಟುಂಬಿಕ ವಾತಾವರಣ ಅವರಲ್ಲಿ
ಸಾಹಿತ್ಯವನ್ನು ಬಿತ್ತಿದೆ
ಎನ್ನುವುದಕ್ಕೆ ಕಿರುಚಿತ್ರದಲ್ಲಿ
ಬಳಸಿರುವ ಪದ್ಯಗಳೇ ಸಾಕ್ಷಿ. ಆಕರ್ಷ
ಅವರ ಕನ್ನಡ ಪದ್ಯಗಳು ಕೆಲವು
ಪತ್ರಿಕೆಗಳಲ್ಲೂ ಪ್ರಕಟವಾಗಿವೆ.
ಇಂಗ್ಲಿಷ್ನಲ್ಲಿ ಅವರು ಬರೆದ ಕಥೆ
ಕಿರುಚಿತ್ರವಾಗಿದೆ.

No comments:

Post a Comment