ಪ್ರಸ್ತುತ ವರ್ಷದ ಎಲ್ಲಾ ದಿನಗಳಲ್ಲೂ ಒಂದಲ್ಲಾ ಒಂದು ದಿನಾಚರಣೆ ಇದ್ದೇ ಇರುತ್ತದೆ. ಆದರೆ ಅವಲ್ಲ್ಲೆವಕ್ಕಿಂತ ಹೆಚ್ಚು ಮೌಲ್ಯಯುತವಾದುದು ಮಕ್ಕಳ ದಿನ. ಆ ಒಂದು ದಿನವಾದರೂ ಎಲ್ಲರೂ ತಮ್ಮ ದಿನ ನಿತ್ಯದ ಒತ್ತಡಗಳಿಂದ ಮುಕ್ತರಾಗಿ ಮಕ್ಕಳ ಸುಂದರ ಭವಿಷ್ಯದ ಕುರಿತು ಚಿಂತಿಸಲಿ ಎಂದು ನೆಹರೂಜಿಯವರ ಕನಸಿರಬಹುದು. ಆದರೆ ಇಂದು ನಾವು ಆ ದಿನಕ್ಕೆ ಕೊಡುತ್ತಿರುವ ಮಹತ್ವ, ಆಚರಿಸುತ್ತಿರುವ ರೀತಿಗಳು ನಮ್ಮನ್ನೆಲ್ಲ ಅಣಕಿಸುವಂತಿವೆ. ಮಕ್ಕಳ ಮನಸ್ಸನ್ನು ಅರಳಿಸಿ, ಕುತೂಹಲವನ್ನು ಕೆರಳಿಸಿ, ಕಲ್ಪನೆಯನ್ನು ರೂಪಿಸಿ, ಭಾವನೆಗಳನ್ನು ಪ್ರಚೋದಿಸಿ, ಆನಂದದಲ್ಲಿ ಮೀಯಿಸಿ ಅವರ ವ್ಯಕ್ತಿತ್ವವನ್ನು ರೂಪಿಸುವಂತಹ ಸುವರ್ಣ ದಿನವಾಗಬೇಕು. ಕನಿಷ್ಠ ಆ ದಿನವಾದರೂ ಮಕ್ಕಳಿಗೆ ಪ್ರಿಯವಾಗುವಂತಹ ಚಟುವಟಿಕೆಗಳನ್ನು ಹಮ್ಮಿಕೊಂಡರೆ ಅದೇ ನಾವು ಮಕ್ಕಳಿಗೆ ಕೊಡುವ ಬಹುದೊಡ್ಡ ಕೊಡುಗೆ.
ಚಿಂತನಶೀಲ ಕವಿ ಖಲೀಲ್ ಗಿಬ್ರಾನರ ಕಾವ್ಯವೊಂದರ ಅದ್ಭುತ ಸಾಲುಗಳೆಂದರೆ,
ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ.
ಜೀವನದ ಸ್ವ ಪ್ರೇಮದ ಪುತ್ರ ಪುತ್ರಿಯರು ಅವರು.
ಅವರು ನಿಮ್ಮ ಮೂಲಕ ಬಂದಿದ್ದಾರೆಯೇ ಹೊರತು ನಿಮ್ಮಿಂದಲ್ಲ.
ನಿಮ್ಮ ಜತೆ ಇರುವರಾದರೂ ಅವರು ನಿಮಗೆ ಸೇರಿದವರಲ್ಲ.
ನಿಮ್ಮ ಪ್ರೀತಿಯನ್ನು ನೀವು ಅವರಿಗೆ ನೀಡಬಹುದು,
ಆದರೆ ನಿಮ್ಮ ಆಲೋಚನೆಗಳನ್ನಲ್ಲ.
ಏಕೆಂದರೆ ಅವರಿಗೆ ಅವರದ್ದೇ ಸ್ವಂತ ಆಲೋಚನೆಗಳುಂಟು.
. . . . . . . . . . . . . . . . . . . . . . . . . . .
ಅವರಂತಿರಲು ನೀವು ಪ್ರಯತ್ನಿಸಬಹುದು.
ಆದರೆ ಅವರನ್ನು ನಿಮ್ಮಂತೆ ಮಾಡಲು ಪ್ರಯತ್ನಿಸದಿರಿ.
. . . . . . . . . . . . . . . . . . . . . . . . . . .
ಆದರೆ ವಾಸ್ತವದ ಚಿತ್ರಣ ಮಕ್ಕಳ ಕನಸಿಗೆ ಬಣ್ಣ ಹಚ್ಚುವ ಯಾವ ಪ್ರಯತ್ನವೂ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ. ಹಿರಿಯರ ಸಮಸ್ಯೆಗೆ ನೀಡುವ ಕಾಲುಭಾಗದಷ್ಟು ಗಮನ ಕೂಡ ಮಕ್ಕಳ ಸಮಸ್ಯೆಗೆ ನೀಡಲಾಗುತ್ತಿಲ್ಲ. ನಮಗೆ ಇವತ್ತಿಗೂ ಮಕ್ಕಳ ಸ್ವತಂತ್ರ ಲೋಕದ ಬಗ್ಗೆ ಅನುಮಾನವಿದೆ. ಮಕ್ಕಳ ವಿಚಾರದಲ್ಲಿ ಯಾವತ್ತೂ ನಾವು ಬಹಳ ದೊಡ್ಡ ತಪ್ಪೊಂದನ್ನು ಮಾಡುತ್ತಿರುತ್ತೇವೆ. ಆದೆಂದರೆ, ನಾವು ದೊಡ್ಡವರು, ಸರ್ವಜ್ಞರು, ಮಕ್ಕಳು ದಡ್ಡರು, ಅವರಿಗೆ ಏನೂ ಗೊತ್ತಿಲ್ಲ, ಎಲ್ಲವನ್ನೂ ಅವರಿಗೆ ಹೇಳಿಕೊಡುತ್ತಾ ಅವರನ್ನು ಸರಿದಾರಿಗೆ ತರುವವರು ಹಿರಿಯರು. ಬಹುಶಃ ಇದಕ್ಕಿಂತಲೂ ದೊಡ್ಡದಾದ ಸುಳ್ಳು ಈ ಜಗತ್ತಿನಲ್ಲಿ ಮತ್ಯಾವುದೂ ಇಲ್ಲ. ಈ ಜಗತ್ತಿಗೆ ಕಾಲಿರಿಸುವ ಪ್ರತಿಯೊಂದು ಮಗುವೂ ಒಂದಲ್ಲಾ ಒಂದು ರೀತಿಯಲ್ಲಿ ಮೇಧಾವಿಗಳಾಗಿರುತ್ತದೆ. ಬುದ್ಧಿವಂತಿಕೆಯಲ್ಲೂ ಅವರು ದೊಡ್ಡವರನ್ನು ಹಿಂದಿಕ್ಕುತ್ತಾರೆ. ಎಷ್ಟೋ ಸಾರಿ ಹಿರಿಯರಿಗೆ ಹೊಳೆಯಲಾರದ್ದು ಎಳೆಯರಿಗೆ ಹೊಳೆದ ಉದಾಹರಣೆಗಳಿವೆ. ಅದಕ್ಕೆ ಬೆರಗಾಗಿದ್ದೇವೆ. ಅನೇಕ ಸಾರಿ ಮಕ್ಕಳಿಂದಲೇ ಅನೇಕ ವಿಚಾರಗಳನ್ನು ಕಲಿಯುತ್ತೇವೆ.
ವಿಪರ್ಯಾಸವೆಂದರೆ, ಯಾರೂ ಮಗುವನ್ನೂ ಒಂದು ಪುಟ್ಟವ್ಯಕ್ತಿ ಎಂದು ಭಾವಿಸುತ್ತಿಲ್ಲ. ಅವರಲ್ಲೂ ವಿಚಾರಗಳಿವೆ, ಭಾವನೆಗಳಿವೆ ಮತ್ತು ಅವರವೇ ಆದ ಕಲ್ಪನೆಗಳು ಇವೆ ಎಂದು ನಂಬಲು ನಾವು ಸಿದ್ಧರಿಲ್ಲ. ಮಗು ತನ್ನ ಸುತ್ತ ಮುತ್ತಲಿನ ಪರಿಸರ ಅವಲೋಕಿಸುತ್ತಾ, ಅದಕ್ಕೆ ಪೂರಕವಾಗಿ ತನ್ನದೇ ಆದ ಅಭಿಪ್ರಾಯದ ಮುಖಾಂತರ ಸ್ಪಂದಿಸುವ ಸಾಮರ್ಥ್ಯವನ್ನು ನಾವು ಗಣನೆಗೆ ತೆಗೆದುಕೊಳ್ಳುವುದೇ ಇಲ್ಲ. ಅವರೊಳಗೂ ನೋವು, ಸಮಸ್ಯೆ, ದುಗುಡ, ತಳಮಳಗಳಿವೆ ಎಂಬುದರೆಡೆಗೆ ನಮಗೆ ಜಾಣ ಕುರುಡು ಮತ್ತು ಜಾಣ ಕಿವುಡು. ನಾವೂ ನಮ್ಮ ಭಾವನೆ, ಅಭಿಪ್ರಾಯಗಳನ್ನು, ನಮಗಿಷ್ಟವೆನಿಸಿದ್ದನ್ನು ಮಕ್ಕಳ ಮೇಲೆ ಸದಾ ಹೇರುವುದಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದೇವೆ.
ನಮ್ಮ ಶಿಕ್ಷಣ ವ್ಯವಸ್ಥೆ ಇದಕ್ಕೆ ಪೂರಕವಾಗಿ ಕೋಲೆ ಬಸವನಂತೆ ತಲೆ ಯಾಡಿಸುತ್ತಿದೆ. ಮಕ್ಕಳಿಗೆ ಏನೂ ತಿಳಿದಿಲ್ಲ ಎಂಬ ನಿರ್ಣಯದೊಂದಿಗೆ ನಮ್ಮ ಶಿಕ್ಷಣದ ಬಹುತೇಕ ಚಟುವಟಿಕೆಗಳು ಪ್ರಾರಂಭವಾಗುತ್ತವೆ. ಅದರಲ್ಲೂ ವಿಶೇಷ ವೆಂದರೆ ಮಕ್ಕಳ ಶಿಕ್ಷಣದ ಎಲ್ಲಾವೂ ಹಿರಿಯರ ನೆಲೆಯಿಂದಲೇ ರೂಪಿಸಲ್ಪಡುತ್ತವೆ. ಅಲ್ಲಿ ಸಣ್ಣವರ ಆಲೋಚನೆಗಳಿಗಿಂತ ಹಿರಿಯೆ ಆಲೋಚನೆಗಳು, ಅಗತ್ಯಗಳು, ಆಶೆಗಳು, ಆಶೋತ್ತರಗಳು ಮಹತ್ವ ಪಡೆಯುತ್ತವೆ. ಮಕ್ಕಳ ಆಸಕ್ತಿ, ಅಭಿರುಚಿ, ಮನೋವಿಜ್ಞಾನವು ಮೂಲೆಗುಂಪಾಗಿರುತ್ತದೆ. ಚೈತನ್ಯದ ಚಿಲುಮೆಗಳಾಗಿರುವ ಮಕ್ಕಳು ಯಾವಾಗಲೂ ಒಂದೆಡೆ ಸುಮ್ಮನೆ ಕುಳಿತುಕೊಳ್ಳವ ಸ್ವಭಾವದವರಲ್ಲ. ಸದಾ ಅವರು ಒಂದು ಪ್ರಕ್ರಿಯೆ, ಚಟುವಟಿಕೆ, ಆಟಗಳಲ್ಲಿರಲು ಬಯಸುತ್ತಾರೆ. ಹಾಗಾಗಿ ಅವರ ಕಲಿಕೆ ಅಂತವುಗಳ ಮುಖಾಂತರವೇ ನಡೆಯುವುದು ಸೂಕ್ತ. ಅದನ್ನು ಗಮನಿಸಿ ಮಕ್ಕಳ ಪ್ರೀತಿಯ ಅಜ್ಜ‘ಕಾರಂತ’ರು ‘ಓದುವ ಆಟ’ ಎಂಬ ಪುಸ್ತಕದ ಮುಖಾಂತರ ಹೊಸ ಹಾದಿ ತುಳಿದರು. ಆದರೆ ಅದನ್ನು ನಾವು ಸ್ವೀಕರಿಸಿದ ಪರಿ ?.
ಕಲಿಕೆ ನಡೆಯುವುದೆಲ್ಲಾ ಶಾಲೆಯೊಳಗೆ ಮಾತ್ರ ಎಂಬ ತಪ್ಪು ಕಲ್ಪನೆ ನಮ್ಮಲ್ಲಿ ಬಲವಾಗಿ ಬೇರೂರಿದೆ. ಮಗು ಹುಟ್ಟಿದಂದಿನಿಂದಲೇ ಸುತ್ತಲ ಪರಿಸರದಿಂದ ಕಲಿಯಲಾರಂಭಿಸುತ್ತದೆ. ನೋಡುವ, ಕೇಳುವ ಮತ್ತು ಮಾಡುವ ತಂತ್ರಗಳ ಮುಖಾಂತರ ಬದುಕಿಗೆ ಅಗತ್ಯವಾದ ಕೌಶಲಕ್ಕೆ ಶಾಲೆಯ ಒಂದು ಖಚಿತತೆ ನೀಡಬೇಕು. ಈ ಅಮೂರ್ತಗಳಿಗೆ ಒಂದು ಮೂರ್ತ ಸ್ವರೂಪ ಕೊಡುವ ಕೊಡುವ ಕೆಲಸ ಶಾಲೆಯಲ್ಲಾಗಬೇಕು. ಅಂದರೆ ಪ್ರಶ್ನೆಗಳಿಗೆ ಉತ್ತರ ಒದಗಿಸುವ ಕಾರ‍್ಯ ಅಲ್ಲಿ ನಡೆಯಬೇಕಾಗಿಲ್ಲ. ಬದಲಾಗಿ ಮಗುವಿನಲ್ಲಿ ಪ್ರಶ್ನೆಗಳನ್ನು ಮೂಡುವಂತೆ ಮಾಡಿದರೆ ಸಾಕು. ಯಾಕೆಂದರೆ ಉತ್ತರ ಹುಡುಕುವ ಕಾಯಕವನ್ನು ಮಗುವೇ ಮಾಡಿಕೊಳ್ಳುತ್ತಾ ಮುಂದಡಿ ಇಡುತ್ತದೆ. ಪ್ರತೀ ಮಗುವಿನಲ್ಲಿ ಕುತೂಹಲವು ರಕ್ತಗತವಾಗಿ ಬಂದಿರುತ್ತದೆ. ಚಿಕ್ಕ ಮಗುವೂ ಎಲ್ಲವನ್ನೂ ಅತ್ಯಂತ ಕುತೂಹಲದಿಂದ ಪರಿಶೀಲಿಸುತ್ತಾ, ಅನುಭವಿಸುತ್ತಿರುತ್ತದೆ. ತನ್ನ ಕುತೂಹಲವನ್ನು ತಣಿಸಿಕೊಳ್ಳಲು ಶೋಧನೆಯತ್ತ ಮುಖ ಮಾಡುತ್ತದೆ. ಕುತೂಹಲ ಮತ್ತು ಸಂಶೋಧನೆಯ ಅಂಶಗಳು ಕಲಿಕೆಯಲ್ಲಿ ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸುವುದರಿಂದ, ಅವನ್ನು ಪ್ರೇರೇಪಿಸುವತ್ತ ನಮ್ಮ ಗಮನ ಕೇಂದ್ರೀಕರಿಸಬೇಕಿದೆ.
ಪ್ರಸ್ತುತ ನಮ್ಮ ಶಿಕ್ಷಣ ವ್ಯವಸ್ಥೆಯು ನೆನಪಿನ ಶಕ್ತಿ, ಪಠ್ಯದ ವಿಷಯ ಮತ್ತು ಅಂಕಗಳಿಗೆ ಮಾತ್ರ ಆದ್ಯತೆ ನೀಡುತ್ತಿದೆ. ಅದರಲ್ಲಿ ಮಗುವಿಗೆ ಅಕ್ಷರಗಳನ್ನು ನೆನಪಿಡುವುದು ಸುಲಭವಲ್ಲ. ಅದರಲ್ಲೂ ಅರ್ಥವಾಗದ ವಿಷಯಗಳನ್ನು ನೆನಪಿಡುವುದು ಮಗುವಿಗೆ ಆಸಕ್ತಿಯ ವಿಷಯವೂ ಅಲ್ಲ. ಮಗುವಿಗೆ ಒಂದು ವಿಷಯ ನಿಧಾನವಾಗಿ ಸ್ಪಷ್ಟವಾಗುತ್ತದೆ. ಹೇಳಿದ್ದನ್ನು ನೆನಪಿನಲ್ಲಿಡಬೇಕು. ಅದನ್ನೇ ಪರೀಕ್ಷೆಯಲ್ಲಿ ಹೇಳಬೇಕು, ಇಲ್ಲವೇ ಬರೆಯಬೇಕು. ಅಂದರೆ ಹೆಚ್ಚು ಮಾರ್ಕು ಬರುತ್ತವೆ. ಆಗ ಅಮ್ಮ ಅಪ್ಪ ಸಂತೋಷ ಪಡುತ್ತಾರೆ. ತನಗೆ ಪೆಟ್ಟು ಬೀಳುವುದಿಲ್ಲ. ಹಾಗಾಗಿ ನಮ್ಮ ಮಕ್ಕಳು ಕುತೂಹಲ ಮತ್ತು ಸಂಶೋಧನೆಗಳತ್ತ ತೊಡಗಿಕೊಳ್ಳದೇ ಮಾರ್ಕ್ಸವಾದದ ಪ್ರಯತ್ನದಲ್ಲಿಯೇ ತೊಡಗಿಕೊಳ್ಳುತಾರೆ. ಅರ್ಥವಾಗದಿದ್ದರೂ ವಿಷಯಗಳನ್ನು ನೆನಪಿನಲ್ಲಿ ತುರುಕಿಕೊಳ್ಳಲು ಪ್ರಾರಂಭಿಸುತ್ತಾರೆ. ದೊಡ್ಡವರ ಮೆಚ್ಚುಗೆ ಸಿಕ್ಕಂತೆಲ್ಲ ಹೆಚ್ಚು ಹೆಚ್ಚು ಮಾರ್ಕು ಪಡಿಯುವ ಹವ್ಯಾಸದಲ್ಲಿ ಬೀಳುತ್ತದೆ, ಬರುಬರುತ್ತಾ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಪಡೆಯುವುದೇ ಜೀವನದ ಸಾಧನೆ ಎಂಬ ಭ್ರಮೆಯಲ್ಲಿ ಬದುಕುತ್ತಾರೆ. ಒಂದು ಪುಸ್ತಕದಲ್ಲಿ ಓದಿದ ನೆನಪು “ನಮ್ಮ ಮಕ್ಕಳು ಹುಟ್ಟುತ್ತಲೇ ವಿಜ್ಞಾನಿಗಳಾಗಿರುತ್ತಾರೆ. ಆದರೆ ನಾವು ಶಾಲೆಗೆ ಸೇರಿಸಿ ಅವರನ್ನು ಇಡಿಯಟ್‌ಗಳನ್ನಾಗಿ ಮಾಡುತ್ತಿದ್ದೇವೆ” ಎಂಬ ಮಾತುಗಳು ಇಂದಿನ ಸ್ಥಿತಿಗೆ ಕನ್ನಡಿಯಂತಿವೆ.
ವಿದ್ಯಾರ್ಥಿಯು ಶಾಲೆಯಲ್ಲಿ ಕಲಿಯುವ ವರ್ಷಗಳು ಬದುಕಿನುದ್ದಕ್ಕೂ ಆನಂದದ ನೆನಪಾಗಿ ಉಳಿಯಬೇಕು. ಇದು ಸಾಧ್ಯವಾಗಬೇಕಾದರೆ ಸ್ಪರ್ಧೆ ಇರಬಾರದು, ಅಧಿಕಾರಕೇಂದ್ರ ಇರಬಾರದು, ಶಿಕ್ಷಣ ಮತ್ತು ಕಲಿಕೆಗಳು ಅಖಂಡ ಪ್ರಕ್ರಿಯೆಗಳಾಗಬೇಕು. ಶಿಕ್ಷಣ ಪುಸ್ತಕಗಳಿಂದಷ್ಟೆ ಅಲ್ಲ, ನೆನಪಿನಂಗಳದಿಂದಷ್ಟೆ ಅಲ್ಲ, ನೋಡುವುದರಿಂದ, ಕೇಳುವುದರಿಂದ, ಪುಸ್ತಕಗಳು ಏನು ಹೇಳುತ್ತವೆ ಅವುಗಳಲ್ಲಿ ಸತ್ಯಾಂಶವೆಷ್ಟು, ಮಿಥ್ಯಾಂಶವೆಷ್ಟು ಎಂದೆಲ್ಲಾ ವಿವೇಚಿಸುವುದರಿಂದಲೂ ದೊರಕುತ್ತದೆ. ಶಾಲೆಯು ಮಕ್ಕಳ ದೃಷ್ಟಿಯಲ್ಲಿ ಹಿಂಸಾಲಯವಾಗಬಾರದು. ಹೂವಿನಂತ ಮಕ್ಕಳನ್ನು ಬಲವಂತದಿಂದ ಅರಳಿಸಬಾರದು. ಅವರು ಸಹಜವಾಗಿ ಅರಳಲು ಅವಕಾಶ ಕೊಡಬೇಕು. ಕಲಿಕೆ ಎನ್ನುವುದು ಅವರಿಗೆ ಆನಂದದಾಯಕ ಚಟುವಟಿಕೆಯಾಗಬೇಕು. ಅವರ ಮೆದುಳು ನಿರರ್ಥಕ, ನಿರುಪಯುಕ್ತ ಮಾಹಿತಿಗಳನ್ನು ಗುಡ್ಡೆ ಹಾಕುವ ಕಸದ ಬುಟ್ಟಿಯಲ್ಲ. ಯಾವುದು ಮಕ್ಕಳಿಗೆ ರುಚಿಸುವುದಿಲ್ಲವೋ, ಉಪಯುಕ್ತ ಎನಿಸುವುದಿಲ್ಲವೋ ಅವುಗಳ ಬಗ್ಗೆ ಅವರಿಗೆ ಆಸಕ್ತಿ ಇರುವುದಿಲ್ಲ. ಎಲ್ಲಿ ಆಸಕ್ತಿ ಇರುವುದಿಲ್ಲವೋ ಅಲ್ಲಿ ಕಲಿಕೆ ನಡೆಯುವುದಿಲ್ಲ ಎಂಬ ಅಂಶಗಳನ್ನು ಇನ್ನಾದರೂ ನಾವು ಅಥಮಾಡಿಕೊಳ್ಳಬೇಕಿದೆ.
ಮಕ್ಕಳ ಬೌದ್ಧಿಕ ಮತ್ತು ದೈಹಿಕ ಬೆಳವಣಿಗೆ ಕುರಿತಾಗಿ ಅನೇಕರು ತಮ್ಮ ಜೀವನವನ್ನೆಲ್ಲಾ ಮುಡುಪಾಗಿಟ್ಟಿದ್ದಾರೆ. ಮನೋವಿಜ್ಞಾನಿಗಳಂತೂ ಮಕ್ಕಳಿಗೆ ಸಿಗಬೇಕಾದ ಸ್ವಾತಂತ್ರ, ಗೌರವ, ಕಾಳಜಿ, ಅವಕಾಶಗಳ ಕುರಿತು ಒತ್ತಿ ಒತ್ತಿ ಹೇಳಿದ್ದಾರೆ. ಆದರೆ ಅದನ್ನು ನಾವು ಯಾರು ಗಣನೆಗೆ ತೆಗೆದು ಕೊಳ್ಳದೇ, ಹಿರಿಯರು ಹೇಳಿದಂತೆ ಮಾಡುವವರು ಮಾತ್ರ ಒಳ್ಳೆಯ ಮಕ್ಕಳು ಎಂಬ ಆಶಾ ಗೋಪುರದಲ್ಲಿದ್ದೇವೆ. ಅದರಿಂದ ಅನೇಕ ಪ್ರತಿಭೆಗಳು ಅರಳುವ ಚಿಗುರುವ ಮೊದಲೇ ಕಮರುತ್ತಿವೆ.
ಇನ್ನೊಂದೆಡೆ ಮಕ್ಕಳ ಸಾಹಿತಿಗಳೆಂದು ನಾವು ರಾಜರತ್ನಂ, ಸಂಗಮೇಶ, ಕಂಚ್ಯಾಣಿ ಶರಣಪ್ಪ, ನಾಗರಾಜ ಶೆಟ್ಟಿ. . . . . ಮುಂತಾದ ದೊಡ್ಡವರ ಹೆಸರನ್ನು ಹೆಸರಿಸುತ್ತೇವೆ. ಆದರೆ ಇಲ್ಲಿ ಬರುವ ಪ್ರಶ್ನೆ ಎಂದರೆ ಮಕ್ಕಳ ಕುರಿತು ಮಕ್ಕಳೇ ಚಿಂತಿಸುವ ಸಾಹಿತಿಗಳು ನಮ್ಮ ನಡುವೆ ಇಲ್ಲವೇ ?. ಎಂಬುದು ಯಕ್ಷಪ್ರಶ್ನೆಯಾಗಿಯೇ ಉಳಿಯುತ್ತದೆ. ನಮ್ಮ ಮಾಧ್ಯಮಗಳೂ ಈ ನಿಟ್ಟಿನಲ್ಲಿ ಹೆಚ್ಚು ಮುತುವರ್ಜಿವಹಿಸುವ ಅಗತ್ಯತೆ ಇಂದು ಹೆಚ್ಚಾಗಿ ಕಂಡು ಬರುತ್ತದೆ.
ಮಕ್ಕಳ ಕುರಿತಂತೆ ಸದಾ ಚಿಂತನೆ ಮಾಡುತ್ತಾ, ಆ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿರುವ ಹಾಸನದ ರೂಪಕ್ಕ ಹೇಳುವುದೇನೆಂದರೆ “ಮಕ್ಕಳ ಕಲ್ಪನಾಶಕ್ತಿಯನ್ನು, ಜ್ಞಾನ, ಅನುಭವಗಳನ್ನು ವಿಸ್ತರಿಸುವಂತಹ, ಅವರ ಮನಸ್ಸನ್ನು ಅರಳಿಸುವ ನಿಟ್ಟಿನಲ್ಲಿ ರಂಜನೆ, ಮಾಹಿತಿ, ಸೃಜನಶೀಲ ಸಂತೋಷವನ್ನು ಹುಡುಕಿಕೊಳ್ಳುವ ಜೊತೆಗೇ ಶಿಕ್ಷಣ, ಮಕ್ಕಳ ಹಕ್ಕು ಹಾಗೂ ಸಮಸ್ಯೆಯ ಅರಿವಿನ ವಿಸ್ತರಣೆಗಾಗಿ ಪತ್ರಿಕೆಗಳು ಗಮನನೀಡಬೇಕಿರುವುದು ಇಂದಿನ ಅನಿವಾರ್ಯತೆ. ಆ ಕೆಲಸ ಆಗೊಮ್ಮೆ ಈಗೊಮ್ಮೆ ಮಾತ್ರವಾಗದೇ ನಿರಂತರವಾಗಿ ಇಂತಹ ವಿಷಯಗಳನ್ನು ಅತ್ಯಂತ ಶ್ರದ್ಧೆ, ಕಾಳಜಿ ಮತ್ತು ಮಕ್ಕಳ ಪರ ಸಂವೇದನೆಯಿಂದ ರೂಪುಗೊಳಿಸಬೇಕು. ಅದನ್ನು ಕೂಡ ಸಾಮಾನ್ಯವಾಗಿ ಮಕ್ಕಳ ಪೋಷಕರು ಹಾಗೂ ಶಿಕ್ಷಕರು ಮಾಡುವಂತೆ, ಬಲವಂತದಿಂದ, ಉಪದೇಶಾತ್ಮಕವಾಗಿ, ನೈತಿಕ ನೆಲೆಯ ಹೆದರಿಕೆಯನ್ನು ಬಿತ್ತುವಂತೆ ರೂಪಿಸದೇ ಮಕ್ಕಳ ಮನಸ್ಸನ್ನು ಅರಿತು ವಿಶೇಷ ಕಾಳಜಿಯಿಂದ ಮಾಡಬೇಕಿದೆ” ಎನ್ನುವುದು ಅಕ್ಷರ ಸಹ ಸತ್ಯ.
ಮಕ್ಕಳಿಗಾಗಿ ರೂಪಿಸಲಾಗಿರುವ ಪತ್ರಿಕೆಗಳನ್ನು ಗಮನಿಸಿದರೆ, ಅವುಗಳ ಗುರಿ ಏನು?ಎನ್ನುವುದು ಸ್ಪಷ್ಟವಾಗಿ ಬಿಡುತ್ತದೆ. ಸಾಮಾನ್ಯವಾಗಿ ರಂಜನೆ, ಮಾಹಿತಿ, ಶಿಕ್ಷಣವೇ ಇವುಗಳ ಪ್ರಮುಖ ಉದ್ದೇಶ. ಸ್ವಲ್ಪ ಹಿರಿಯ ಮಕ್ಕಳ ಮನೋವಿಕಾಸಕ್ಕಾಗಿ, ಅವರ ಸಮಸ್ಯೆಗಳನ್ನು ಚರ್ಚಿಸುವಂತಾ, ವಾಸ್ತವ ಲೋಕದ ಗಂಭೀರ ವಿಷಯಗಳು ಇದರಲ್ಲಿ ಪ್ರವೇಶ ಪಡೆಯುವುದೇ ಇಲ್ಲ. ಮಕ್ಕಳಿಗೆ ಮಾಹಿತಿಯನ್ನು ರಂಜನೀಯವಾಗಿ ಕೊಡುವ ಪ್ರಯತ್ನಗಳು ಕಡಿಮೆ. ಪ್ರಸ್ತುತ ಸುದ್ದಿ ಮಾಧ್ಯಮಗಳಲ್ಲಿನ ವಿಚಾರಗಳನ್ನು ಮಕ್ಕಳ ಮಟ್ಟಕ್ಕೆ ಇಳಿದು ನೀಡುವಂತಾ ಪ್ರಯತ್ನಗಳು ತುಂಬಾ ಕಡಿಮೆ ಮಟ್ಟದಲ್ಲಾಗಿವೆ. ಮಕ್ಕಳು ಎದುರಿಸುತ್ತಿರುವ ಸಮಸ್ಯೆಗೆ ತಜ್ಞರಿಂದ ಉತ್ತರ, ಮಕ್ಕಳ ವಿಶೇಷ ಅನುಭವಗಳಿಗೆ ಜಾಗ, ಒಂದು ವಿಷಯ ನೀಡಿ ಮಕ್ಕಳ ಅಭಿಪ್ರಾಯ ಆಹ್ವಾನಿಸುವುದನ್ನು ಮಾಡಿದಾಗ ಮಕ್ಕಳಿಗೆ ತಾವೇ ತಮ್ಮದೊಂದು ಅನನ್ಯತೆಯನ್ನು, ಅಭಿಪ್ರಾಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಮಕ್ಕಳನ್ನು ಸಂದರ್ಶಿಸಿ, ಸಮೀಕ್ಷೆ ನಡೆಸಿ ಅವರ ಇಷ್ಟಾನಿಷ್ಟಗಳನ್ನು ಕೇಂದ್ರೀಕರಿಸಿಯೇ ಮಕ್ಕಳ ಪತ್ರಿಕೆ ರೂಪುಗೊಳ್ಳಬೇಕು ಮತ್ತು ದೊಡ್ಡವರ ಪತ್ರಿಕೆಗಳಲ್ಲಿ ಚರ್ಚಿಸುವ ಮಕ್ಕಳ ವಿಷಯಗಳಿಗೆ ಅವರ ಸ್ವ ಅನುಭವ, ಅಭಿಪ್ರಾಯಗಳು, ಅವರೇ ಸೂಚಿಸುವ ಪರಿಹಾರೋಪಾಯಗಳು ಅತ್ಯಂತ ಅವಶ್ಯವಾದುವು.
ಮಕ್ಕಳಿಗೆ ಇಂದು ಏನೆಲ್ಲಾ ಅಗತ್ಯವಿದೆ? ಅವರಿಗೆ ವಿಭಿನ್ನವೂ, ವಿಶೇಷವೂ ಆದ ಹೊಸತೇನನ್ನು ಕೊಡಬಹುದು? ಅವರನ್ನು ಒಳಗೊಳ್ಳುವುದು ಹೇಗೆ? ಶೋಷಣೆಗೆ, ಅವಗಣನೆಗೊಳಗಾದ ಮಕ್ಕಳ ಸಮಸ್ಯೆಯ ಆಳ, ಅಗಲ, ವಿಸ್ತಾರಗಳೇನು? ಎಂಬುದರ ಕುರಿತು ಈಗಲಾದರೂ ನಾವು ಸರಿಯಾದ ದಿಕ್ಕಿನಲ್ಲಿ ಯೋಚಿಸದಿದ್ದರೆ ಮುಂದೆ ಅಪಾಯ ಕಾದಿದೆ. ಸಾಮಾನ್ಯವಾಗಿ ಪೋಷಕರು ತಮಗೆ ಸಾಧಿಸಲಾಗದ ಕನಸುಗಳನ್ನು ಮಕ್ಕಳ ಮೂಲಕ ಸಾಧಿಸಲು ಬಯಸುತ್ತಾರೆ. ತಮ್ಮ ಮಕ್ಕಳ ಸಾಧನೆಯ ಮೂಲಕ ಸಮಾಜದಲ್ಲಿ ಪುರಸ್ಕಾರ ಗೌರವಗಳನ್ನು ಪಡೆಯುವ ಆಸೆ ಹೊಂದಿರುತ್ತಾರೆ. ಆದರೆ ತಮ್ಮ ಅಗತ್ಯಗಳಿಗಾಗಿ, ತಮ್ಮ ಸಮಯದ ಚೌಕಟ್ಟಿನಲ್ಲಿ, ತಮಗೆ ಬೇಕಾಗ ಮಟ್ಟದಲ್ಲಿ, ಮಕ್ಕಳಲ್ಲಿ ವ್ಯಕ್ತಿತ್ವವನ್ನು ರೂಪಿಸುವ ಆತುರದ ಪ್ರಯತ್ನದಲ್ಲಿ, ಮಕ್ಕಳ ವಿಕಾಸದ ಮೇಲೆ ಆಗುತ್ತಿರುವ ಪರಿಣಾಮಗಳತ್ತ ಕಣ್ಣು ಹಾಯಿಸಿದರೆ ದೊಡ್ಡ ಆತಂಕ ಎದ್ದು ಕಾಣುತ್ತದೆ. ಅದು ಹೀಗೆಯೇ ಮುಂದುವರೆದರೆ ಮುಂದಿನ ಸಮಾಜ, ಪ್ರಜೆಗಳು ನಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ. ಇನ್ನಾದರೂ ನಾವು ಜಾಗೃತರಾಗೋಣ.
No comments:
Post a Comment