Sunday 10 July 2011

ಅಕ್ಕರೆಯ ಗುರುಗಳಿಗೆ ಸಕ್ಕರೆಯ ಬಿಳ್ಕೊಡುಗೆ..

 ಮುಖ್ಸಗುರುಗಳಿಂದ ಸನ್ಮಾನಿತರಾಗುತ್ತಿರುವ ಶ್ರೀ ಗುಂಡಪ್ಪ ಸರ್
ವತ್ತಿನ ದಿನ ನಮ್ಮ ಕೊಡಚಿ ಶಾಲೆಯ ವಿದ್ಯಾರ್ಥಿಗಳಿಗೆ, ಗ್ರಾಮಸ್ಥರಿಗೆ, ಶಿಕ್ಷಕರುಗಳಿಗೆ ದುಃಖದಾಯಕವಾದ ದಿನ. ಕಾರಣ ನಮ್ಮೆಲ್ಲರ ಅಕ್ಕರೆಯ ಶಿಕ್ಷರಾದ ಶ್ರಿ ಗುಂಡಪ್ಪಅವರಿಗೆ ಸಕ್ಕರೆಯ ಬೀಳ್ಕೊಡುಗೆ. 2010-11ನೇ ಸಾಲಿನ ಶಿಕ್ಷಕರ ವರ್ಗಾವಣೆಯಲ್ಲಿ ಸಮೀಪದ ಸ.ಮಾ.ಹಿ.ಪ್ರಾ.ಶಾಲೆ ಆಂದೋಲಾಗೆ ವರ್ಗಾವಣೆಯಾಗಿರುವ ಅವರದು ಅಂದು ನಮ್ಮ ಶಾಲೆಯಲ್ಲಿ ಕೊನೆಯ ಸೇವೆಯ ದಿನ.
 02-08-2002ರಂದು ಸೇವೆಗೆ ಸೇರಿದ ಶ್ರೀ ಗುಂಡಪ್ಪ ಅವರದು ಒಂಬತ್ತು ವರ್ಷಗಳ ಪ್ರಾಮಾಣಿಕ ಸೇವೆ. ಯಾರೇನೆ ಅಂದರು ಎಲ್ಲವನ್ನು ಕ್ಷಮಾಗುಣದಿಂದ ಪರಿಭಾವಿಸುವ ಪ್ರವೃತ್ತಿ. ಪ್ರಾಥಮಿಕ ಹಂತದ ಮಕ್ಕಳಿಗಂತೂ ಗುಂಡಪ್ಪ ಸರ್ ಅಂದರೆ ಪಂಚಪ್ರಾಣ. ಅವರು ರಜೆಯ ಮೇಲಿದ್ದರಂತೂ ಅವರನ್ನು ವಿಚಾರಿಸದ ಮಕ್ಕಳೇ ಇಲ್ಲ..
ಪಾಠ- ಪ್ರವಚನಗಳೂ ಅಷ್ಟೇ, ಮಕ್ಕಳ ಮಟ್ಟಕ್ಕಿಳಿದು ಮಕ್ಕಳಂತಾಗಿ ಕಲಿಸುವ ಅವರ ಕಲಿಕಾ ಚಟುವಟಿಕೆಗಳು ತೀರಾ ಸುಲಭ. ಸರಳ ಮತ್ತು ಅಷ್ಟೇ ಸಂತಸದಾಯಕವಾಗಿದ್ದವು. 40ರ ಆಸುಪಾಸಿನಲ್ಲಿದ್ದರೂ ಅವರ ಉತ್ಸಾಹದ ಚಿಲುಮೆಗೆ ಬರವಿಲ್ಲ. ಹೊಸದಾಗಿ ಬಂದ ನಾವು ಕೆಲವೊಂದು ಸಲ ಬೇಸರಿಸಿಕೊಂಡರೂ ಗುಂಡಪ್ಪ ಅವರಂತು ಒಂದಿಷ್ಟೂ ಬೇಸರಿಸಿಕೊಳ್ಳದೇ ನಮಗೆ ಸ್ಫೂರ್ತಿ ನೀಡುತ್ತಿದ್ದರು. ಈ ಎಂಟು ವರ್ಷಗಳ ಅವರಶೈಕ್ಷಣಿಕ ಮತ್ತು ಆಡಳಿತಾತ್ಮಕ ಚಟುವಟಿಕೆಗಳು ಅವಿಸ್ಮರಣೀಯ.ಅವರದು ಆಮೆಗತಿಯಾದರೂ ಫಲಿತಾಂಶ ಮಾತ್ರ ನಿಖರ ಮತ್ತು ವೇಗದ್ದು.
ಆದರೆ ಅಂದು ಅಲ್ಲಿ ನೆರೆದಿದ್ದವರ ಕಣ್ಣಾಲಿಗಳಲ್ಲಿ ಕಂಬನಿಗಳ ಮತ್ತು ಶುಭಾಶಯಗಳ ಹೊರತು ಏನೇನೂ ಇರಲಿಲ್ಲ. ಅಕ್ಕರೆಯ ಗುಂಡಪ್ಪ ಸರ್ ಗೆ ನಮ್ಮ ಕೊಡಚಿ ಶಾಲೆಯಿಂದ ಸಕ್ಕರೆಯ ಬೀಳ್ಕೊಡುಗೆ.. ನಿಮಗೆ ಶುಭವಾಗಲಿ..

    ---ಸಚಿನ್ ಕುಮಾರ ಬಿ.ಹಿರೇಮಠ

ಜೀವಕೋಶದ ಪರಿಕಲ್ಪನೆ ಮೂಡಿಸುವುದು ಹೇಗೆ?

ಜೀವಕೋಶದ 3ಡಿ ಚಿತ್ರ
ಪ್ರಾಥಮಿಕ ಹಂತದಲ್ಲಿ ಜೀವಕೋಶ ಮತ್ತು ಅದರ ಕಣದಂಗಗಳ ಪರಿಕಲ್ಪನೆಮೂಡಿಸುವುದು ವಿಜ್ಞಾನ ಶಿಕ್ಷಕರಿಗೂ ಸುಲಭವಲ್ಲ. ಆದರೂ ಕಲಿಕಾ ಪ್ರಕ್ರಿಯೆಗಳ ನಡುವೆ ಜೀವಕೋಶದ ಪರಿಕಲ್ಪನೆ ವಿದ್ಯಾರ್ಥಿಗಳಲ್ಲಿ ಸುಲಭವಾಗಿ ಮೂಡುವಂಥದಲ್ಲ. ಜೀವಕೋಶದ ವ್ಯಾಖ್ಯೆಯನ್ನು ಗಮನಿಸಿದಾಗ ಸಜೀವಿಗಳ ದೆಹದ ರಚನಾತ್ಮಕ ಮತ್ತು ಕಾರ್ಯನಿರ್ವಾಹಕ ಘಟಕವೇ ಜೀವಕೋಶ ಎಂದು. ಅಂದರೆ ಜೀವಕೋಶವು ದೇಹದ ರಚನೆಯಲ್ಲಿ ಮತ್ತು ವಿವಿಧ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಅಲ್ಲದೆ ನಮ್ಮ ದೇಹವು ಬೇರೆ ಬೆರೆ ಜೀವಕೋಶಗಳಿಂದ ರಚನೆಯಾಗಿದೆ ಎಂಬುದನ್ನು ತಿಳಿಸಿಕೊಡಬೇಕು. ಉದಾಹರಣೆಗೆ ಚರ್ಮದ ಜೀವಕೋಶಗಳು, ಕ್ತದ ಜೀವಕೋಶಗಳು, ಸ್ನಾಯು ಜೀವಕೋಶಗಳು ಮೂಳೆಯ ಜೀವಕೋಶಗಳು ಹೀಗೆ ಅನೇಕ ಅಂಗಗಳು ಅಂಗಾಂಶಗಳಿಂದ, ಅಂಗಾಂಶಗಳು ಒಂದೇ ವಿಧದ ಜೀವಕೋಶಗಳಿಮದ ರಚನೆಯಾಗಿವೆ ಎಂಬುದನ್ನು ತಿಳಿಸಿಕೊಡಬೇಕು. ಒಂದು ಕಟ್ಟಡ ಹೇಗೆ ಇಟ್ಟಿಗೆಗಳಿಂದಾಗಿದೆಯೋ ಅದೇ ರೀತಿ ನಮ್ಮ ದೇಹದ ಭಾಗಗಳು ಜೀವಕೋಶಗಳೆಮಬ ಕಿರು ಇಟ್ಟಿಗೆಗಳಿಂದಾಗಿವೆ ಎಂದು ಹೋಲಿಸಿ ಅನುಗಮನ ವಿಧಾನದಿಂದ ಮನಗಾಣಿಸಬೆಕು. ನಮ್ಮ ದೇಹದಲ್ಲಿ ಹೇಗೆ ಬೇರೆ ಬೇರೆ ಅಂಗಗಳಿವೆಯೊ ಅದೇ ರೀತಿ ಜೀವಕೋಶದಲ್ಲೂ ಬೇರೆ ಬೇರೆ ಭಾಗಗಳಿವೆ, ಇವನ್ನೇ ನಾವು ಕಣದಂಗಗಳು ಎಂದು ಕರೆಯುತ್ತೇವೆ ಎಂದುಹೇಳಬೇಕು.
 ಮುಮದುವರೆದಂತೆ ಬೆರೆ ಬೇರೆ ಕಣದಂಗಗಳ ಕಾರ್ಯಗಳನ್ನು ಶಿಕ್ಷಕರು ವಿವಿಧ ಮಾದರಿಗಳನ್ನು ಬಳಸಿ ಪ್ರದರ್ಸಿಸಬೇಕು. ವಿದ್ಯಾರ್ಥಿಗಳಿಗೆ ಜೀವಕೋಶದ ಪರಿಕಲ್ಪನೆ ಮನದಟ್ಟಾದ ಮೇಲೆ ಮಾತ್ರ ವಿವಿಧ ಅಂಗಾಂಶಗಳ ಕುರಿತು ತಿಳಿಸುವುದು ಒಳಿತು. ಅಲ್ಲದೆ ಪ್ರತಿ ವಿಜ್ಞಾನ ಬೋಧನೆಯಲ್ಲಿ ವೈಜ್ಞಾನಿಕ ಸಂಗತಿಗಳನ್ನು ತಿಳಿಸುವುದು ಮರೆಯಬಾರದು. ಕೋಶದ ಶಕ್ತಿ ಉತ್ಪಾದನಾ ಕೇಂದ್ರ ಮೈಟೋಕಾಂಡ್ರಿಯ, ಆತ್ಮಹತ್ಯಾ ಸಂಚಿ ಲೈಸೋಸೋಮ್, ಕೋಶದ ಪ್ರೋಟೋನ್ ಕಾರ್ಕಾನೆ ರಯಬೋಸೊಮ್ ಹೀಗೆ ಪ್ರತಿಯೊಮದಕ್ಕೂ ತಕ್ಕುದಾದ ಮಾಹಿತಿ ನೀಡುತ್ತಾ ಬೋಧನಾ ಕಲಿಕಾ ಪ್ರಕ್ರಿಯೆಯನ್ನು ಸಂತಸದಾಯಕವನ್ನಾಗಿ ಮಾಡಿದಲ್ಲಿ ಯಾವ ವೈಜ್ಞಾನಿಕ ಪರಿಕಲ್ಪನೆಗಳು ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗಲಾರವು ಎಂಬುದು ನನ್ನ ಅಭಿಪ್ರಾಯ.

             ---ಸಚಿನ್ ಕುಮಾರ .ಹಿರೇಮಠ

ಮಗುವಿಗೊಂದು ಮರ ಶಾಲೆಗೊಂದು ವನ ; ಒಂದು ಪರಿಚಯ

ಮಾನ್ಯ ಮುಖ್ಯಮಂತ್ರಿಗಳು 2011-12ನೇ ಸಾಲಿನಿಂದ ಎಲ್ಲ ಶಾಲಾ ಕಾಲೇಜುಗಳಲ್ಲಿ ಮಗುವಿಗೊಂದು ಮರ ಶಾಲೆಗೊಂದು ವನ ಎಂಬ ವಿನೂತನವಾದ ಕಾರ್ಯಕ್ರಮವೊಂದಕ್ಕೆ ಚಾಲನೆ ನೀಡಿದರು. ಇದರ ಕ್ರಕಾರ 5ನೇ ತರಗತಿಯಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳು ತಮ್ಮ ಇಷ್ಟದಂತೆ ಶಾಲೆಯ ಆವರಣದೊಳಕ್ಕೆ ಹಾಗೂ ತಮ್ಮ ಮನೆಯ ಸುತ್ತಮುತ್ತ ಒಂದೊಂದು ಸಸಿ ನೆಡುವುದು. ನಿರಂತರವಾಗಿ ಆ ಸಸಿಯನ್ನು ತನ್ನದೇ ಎಂಬಂತೆ ನೀರೆರೆದು ಪೋಷಣೆ ಮಾಡುವುದು. ಹೀಗೆ ವಿದ್ಯಾರ್ಥಿಗಳೇ ಸ್ವಯಂ ಸಸಿ ನೆಡುವುದರಿಮದ ಶಾಲೆಯಲ್ಲಿ ಒಂದು ವನವನ್ನೇ ಸೃಷ್ಟಿ ಮಾಡಬಹುದು, ಶಾಲಾ ವಾತಾವರಣವನ್ನು ಪರಿಸರ ಸ್ನೇಹಿಯನ್ನಾಗಿ ಮಾಡಬಹುದು.
   ಶಿಕ್ಷಕ ಮಿತ್ರರೇ ನನ್ನ ಒಂದು ಸ್ವಾನುಭವವನ್ನು ನಾನಿಲ್ಲಿ ಒಂದಿನಿತು ಪ್ರಸ್ತಾಪಿಸುತ್ತೇನೆ. ನಾನು 3ನೇ ವರ್ಗದಲ್ಲಿದ್ದಾಗ ನಮ್ಮ ಶಿಕ್ಷಕರ ಆಣತಿಯಂತೆ ನಮ್ಮ ಶಾಲೆ(ಸರ್ಕಾರಿ ರನ್ನ ಮಾದರಿಯ ಪ್ರಾಥಮಿಕ ಶಾಲೆ ಮುಧೋಳ)ದಲ್ಲಿ ಒಂದು ಸಸಿ ನೆಟ್ಟು ಅದಕ್ಕೇ ನಮ್ಮದೇ ಹೆಸರನ್ನಿಟ್ಟು ಅದನ್ನು ಪೋಷಿಸುತ್ತ ಬಂದೆವು. ನಾನು 5ನೇ ತರಗತಿ ಮುಗಿಸುವ ಹೊತ್ತಿಗೆ ಅದು ನನ್ನಷ್ಟು  ಎತ್ತರ ಬೆಳೆದಿತ್ತು. ಈಗ ಆ ಶಾಲೆ ತೊರೆದು ಸುಮಾರು 15ವರ್ಷಗಳಾಗಿವೆ.ಈಗಲೂ ಆ ಮರವನ್ನು ಕಂಡಾಗ ಎಲ್ಲಿಲ್ಲದ ಖುಷಿಯಾಗುತ್ತದೆ. ಇದೇ ರೀತಿ ನಾವು ನಮ್ಮ ಶಾಲಾ ವಾತಾವರಣದಲ್ಲಿ ವಿದ್ಯಾರ್ಥಿಗಳಿಂದ ಸಸಿ ನೆಡಿಸಿದಾಗ ವಿದ್ಯಾರ್ಥಿಗಳಲ್ಲಿ ನೈಜವಾದ ಪರಿಸರ ಪ್ರೇಮ ಒಡಮೂಡುತ್ತದೆ.
                ಉತ್ತಮವಾದ ಶಾಲಾ ಕಾಂಪೌಂಡ್ ಹೊಂದಿದ ಶಾಲೆಗಳಂತೂ ನಿಜವಾಗಿಯೂ ಒಂದು ಸುಂದರ ವನದಂತೆ ತೋರುತ್ತವೆ.
  ನಮ್ಮ ಕೊಡಚಿ ಶಾಲೆಯ ವಾತಾವರಣ ಹೀಗಿಲ್ಲ. ನಮ್ಮ ಶಾಲಾ ಕಟ್ಟಡಗಳು ಅಲ್ಲಲ್ಲಿ ಹಂಚಿ ಹೋಗಿರುವುದರಿಂದ ಆಯಾ ತರಗತಿ ಗಳಮುಂದೆಯೇ ನಮ್ಮ ವಿದ್ಯಾರ್ಥಿಗಳು ಸಸಿ ನೆಡಲು ಸಿದ್ಧರಾಗಿದ್ದಾರೆ. ಎಲ್ಲ ಶಿಕ್ಷಕರುಈಒಂದು ಸುಂದರ ಪರಿಸರ ಸ್ನೇಹಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸಲಿ.. Best of luck Teachers....

---ಸಚಿನ್ ಕುಮಾರ ಬ.ಹಿರೇಮಠ